ಜಿಲ್ಲೆ

ಒಂದೂವರೆ ವರ್ಷಕ್ಕೆ ವಾಲಿದ ತಡೆಗೋಡೆ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಅವಾಂತರ

ಕೆ.ಎನ್.ರಾಘವೇಂದ್ರ

ಮಂಡ್ಯ: ವಿವಾದ, ಅವಾಂತರಗಳಿಂದಲೇ ಖ್ಯಾತಿ ಪಡೆದಿರುವ ಬೆಂಗಳೂರು-ಮೈಸೂರು ರಾಷ್ಟ್ರೀಯ ದಶಪಥ ಹೆದ್ದಾರಿಯ ತಡೆಗೋಡೆ ಕೇವಲ ಒಂದೂವರೆ ವರ್ಷಕ್ಕೆ ವಾಲಿಕೊಂಡಿದೆ. ಕಾಮಗಾರಿಯ ಗುಣಮಟ್ಟದ ಪ್ರಶ್ನೆ ಮೂಡುವಂತಾಗಿದೆ.
ಸುಮಾರು 10 ಸಾವಿರ ಕೋಟಿ ರೂ ವೆಚ್ಚದಲ್ಲಿ ದಶಪಥ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗಿದೆ. 2023 ಮಾ.12ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಸ್ತೆ ಲೋಕಾರ್ಪಣೆಗೊಳಿಸಿದ್ದರು. ಆದರೆ ಬಹುತೇಕ ಕಡೆ ಕಾಮಗಾರಿ ಸರಿಯಿಲ್ಲ ಎನ್ನುವ ಟೀಕೆಗಳು ಕೇಳಿಬರುತ್ತಲೇ ಇದೆ. ಇದರ ನಡುವೆಯೇ ತಾಲೂಕಿನ ಹಳೇಬೂದನೂರು ಗ್ರಾಮದಲ್ಲಿ ತಡೆಗೋಡೆ ಒಂದೆಡೆ ವಾಲಿಕೊಂಡಿದೆ.
ಒಂದೆರಡಲ್ಲ ಕಾಮಗಾರಿ ಅಧ್ವಾನ: ದಶಪಥ ಹೆದ್ದಾರಿ ಸೃಷ್ಟಿಸುವ ಅವಾಂತರ ಒಂದೆರೆಡಲ್ಲ. ರಸ್ತೆಯ ಗುಣಮಟ್ಟ ಸರಿಯಿಲ್ಲ, ಟೆಂಡರ್‌ನಲ್ಲಿ ಒಪ್ಪಿಕೊಂಡಂತೆ ಅಂಡರ್‌ಪಾಸ್ ನಿರ್ಮಾಣ ಮಾಡಿಲ್ಲ, ಮಳೆ ನೀರು ಹರಿಯಲು ಸರಿಯಾದ ವ್ಯವಸ್ಥೆಯಿಲ್ಲ, ಅಂಡರ್‌ಪಾಸ್‌ನಲ್ಲಿ ವಿದ್ಯುತ್ ದೀಪ ಅಳವಡಿಸಿಲ್ಲ ಎಂಬಿತ್ಯಾದಿ ದೂರು ಕೇಳಿಬರುತ್ತಲೇ ಇದ್ದವು. ಇವುಗಳನ್ನು ಆದ್ಯತೆ ಮೇರೆಗೆ ಬಗೆಹರಿಸುವ ಹೊತ್ತಿಗೆ ಮತ್ತೊಂದು ಸಮಸ್ಯೆ ಎದುರಾಗುತ್ತಲೇ ಇದೆ.
ಈ ನಡುವೆ ಅವೈಜ್ಞಾನಿಕ ಕಾಮಗಾರಿಯಿಂದಾಗಿ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಎಕ್ಸಿಟ್, ಎಂಟ್ರಿ ವ್ಯವಸ್ಥೆಯೂ ಸರಿಯಾಗಿಲ್ಲ ಎನ್ನುವ ದೂರು ಇದೆ. ಆದರೆ ಗುತ್ತಿಗೆ ಪಡೆದಿರುವವರು ಕಾಮಗಾರಿ ಸರಿಯಾಗಿ ನಿರ್ವಹಿಸಿಲ್ಲ ಎನ್ನುವ ಗಂಭೀರ ಆರೋಪಕ್ಕೆ ಪೂರಕವಾಗಿ ತಡೆಗೋಡೆ ವಾಲಿಕೊಂಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ತಡೆಗೋಡೆ ವಾಲಿರುವುದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಆತಂಕ ಎದುರಾಗಿದೆ.
ವಾರದಿಂದ ತಡೆಗೋಡೆ ವಾಲಿರುವುದನ್ನು ತಡೆಯಲು ಹೆದ್ದಾರಿ ಪ್ರಾಧಿಕಾರ ಕಬ್ಬಿಣದ ರಾಡು ಅಳವಡಿಸಲು ರಂಧ್ರಗಳನ್ನು ಮಾಡಿ ಜೊತೆಗೆ ಕಾಂಕ್ರಿಟ್ ತುಂಬುವ ಕಾಮಗಾರಿ ಸಾಗಿದೆ. ಇದು ಸಹ ಅವೈಜ್ಞಾನಿಕ, ಕಳಪೆ ಕಾಮಗಾರಿ ಎಂಬ ದೂರು ಸ್ಥಳೀಯರಿಂದ ವ್ಯಕ್ತವಾಗಿದ್ದು, ರಾಷ್ಟಿಥಯ ಹೆದ್ದಾರಿ ಪ್ರಾಧಿಕಾರ ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.

ಉತ್ತರ ಭಾರತದ ಹಲವು ಕಾಮಗಾರಿ ಇದೇ ರೀತಿ ಅಧ್ವಾನಗೊಂಡಿರುವ ಸಾಕಷ್ಟು ಉದಾಹರಣೆ ನಮ್ಮ ಮುಂದಿವೆ. ಇನ್ನು ಬೆಂಗಳೂರು-ಮೈಸೂರು ರಾಷ್ಟ್ರೀಯ ದಶಪಥ ಹೆದ್ದಾರಿಯ ಕಾಮಗಾರಿ ಸರಿಯಾಗಿ ನಡೆದಿಲ್ಲ ಮತ್ತು ಕಳಪೆ ಎನ್ನುವುದರ ಬಗ್ಗೆ ಹಲವು ಬಾರಿ ಹೇಳಿದ್ದೇನೆ. ಗುತ್ತಿಗೆ ಪಡೆದವರು ಸಮರ್ಪಕವಾಗಿ ಕೆಲಸ ಮಾಡಿಲ್ಲ. ಆದ್ದರಿಂದ ಕಾಮಗಾರಿ ಬಗ್ಗೆ ತನಿಖೆಯಾಗಬೇಕು.ರವಿಕುಮಾರ್ ಗಣಿಗಶಾಸಕ, ಮಂಡ್ಯ