ಸಾಲಿಗ್ರಾಮ: ಮಾಗಡಿ-ಸೋಮವಾರಪೇಟೆ-ಜಲಸೂರು ರಾಜ್ಯ ಹೆದ್ದಾರಿ ಕಾಮಗಾರಿ ಕ್ರಮಬದ್ಧವಾಗಿ ನಡೆಯುತ್ತಿಲ್ಲ. ಹಾರಂಗಿ ಕಿರು ನಾಲೆಗಳನ್ನು ಮುಚ್ಚಿದ್ದು ಸೇತುವೆ ನಿರ್ಮಾಣ ಮಾಡದೆ ರಸ್ತೆ ಮಾಡಿದ್ದಾರೆ. ಹಾಗಾಗಿ ಮಳೆಯ ನೀರು, ಮನೆಗಳಿಗೆ ನುಗ್ಗಿ ಅಪಾರ ನಷ್ಟವಾಗುತ್ತಿದೆ ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿದ್ದಾರೆ.
ಮಂಗಳವಾರ ಹುಣಸೂರು ವಿಭಾಗಾಧಿಕಾರಿ ಮಹಮದ್ ಹಾರಿಸ್ ಸುಮೈರ್ ಸಾಲಿಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರೈತ ರಕ್ಷಣಾ ಕಾರ್ಮಿಕ ವೇದಿಕೆ ಜಿಲ್ಲಾಧ್ಯಕ್ಷ ತಂದ್ರೆ ಕೊಪ್ಪಲು ಮಂಜುನಾಥ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕಳ್ಳಿ ಮುದ್ದನಹಳ್ಳಿ ಚಂದ್ರು ಸೇರಿದಂತೆ ಹಲವು ಗ್ರಾಮಸ್ಥರು ರಸ್ತೆ ಕಾಮಗಾರಿಯಲ್ಲಿ ನಾಲೆಗಳನ್ನು ಮುಚ್ಚಿ ಹೋಗಿದ್ದು, ಕೂಡಲೇ ಅದನ್ನು ಸರಿಪಡಿಸುವಂತೆ ಮನವಿ ಸಲ್ಲಿಸಿಮನವಿ ಮಾಡಿದರು.
ಈ ವೇಳೆ ಜಿಲ್ಲಾ ಸಂಚಾಲಕ ಕಳ್ಳಿ ಮುದ್ದನಹಳ್ಳಿ ಚಂದ್ರು ಮಾತನಾಡಿ, ಚರಿಂಡಿಗಳು ನಿರ್ಮಾಣವಾಗದೆ ಇರುವ ಕಾರಣ ಮಂಗಳವಾರ ಸುರಿದ ಮಳೆಯಿಂದ ರಾಜ್ಯ ಹೆದ್ದಾರಿಯಲ್ಲಿ ಬಂದ ನೀರು ಸಮೀಪದ ಮನೆಗಳಿಗೆ ನುಗ್ಗಿ ಲಕ್ಷಾಂತರ ರೂ. ನಷ್ಟವಾಗಿದೆ. ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಿ 3 ವರ್ಷ ಕಳೆದರೂ ಇನ್ನು ಪೂರ್ಣವಾಗದ ಕಾರಣ ಇಂತಹ ಸಮಸ್ಯೆ ಹೆಚ್ಚಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಮೇಲಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಮುಚ್ಚಿರುವ ಕಿರು ನಾಲೆಗಳನ್ನು ತೆರೆದು, ಸೇತುವೆಗಳನ್ನು ನಿರ್ಮಿಸಿ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ಈ ರಸ್ತೆ ಅಭಿವೃದ್ಧಿ ಕಾಮಗಾರಿಯಿಂದ ಮನೆ ಕಳೆದುಕೊಂಡ ಮತ್ತು ಭೂಮಿ ಕಳೆದುಕೊಂಡ ರೈತರಿಗೆ ಕೂಡಲೇ ಪರಿಹಾರ ಒದಗಿಸಿಕೊಡಬೇಕು. ತಾಲೂಕಿನ ಸಂಭ್ರಮವಳ್ಳಿ ಗ್ರಾಮದಿಂದ ಹೆಬ್ಸೂರು ಗೇಟ್ ವರೆಗೆ ಕಾಮಗಾರಿ ಅಲ್ಲಲ್ಲೇ ಅರ್ಧಕ್ಕೆ ನಿಂತಿದೆ ಕೂಡಲೇ ರಸ್ತೆ ಕಾಮಗಾರಿ ಪೂರ್ಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.