ದೇವದುರ್ಗ ತಾಲೂಕು ಕಾಕರಗಲ್ ಟೋಲ್ ಗೇಟ್ ಮುಂದೆ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ನಡೆಸಿದ ಸಂಚಾರ ತಡೆ ಹೋರಾಟದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ್ ಪಾಟೀಲ್ ಮಾತನಾಡಿದರು. ಮುಖಂಡರಾದ ಬೂದಯ್ಯ ಸ್ವಾಮಿ, ಸೂಗುರಯ್ಯ ಸ್ವಾಮಿ, ವೆಂಕಪ್ಪ ಕಾರಬಾರಿ, ಲಿಂಗಾರೆಡ್ಡಿ ಪಾಟೀಲ್, ವೀರೇಶ ಗವಿಗಟ್, ರಮೇಶ ಅಬಕಾರಿ, ಹಾಜಿ ಮಸ್ತಾನ್ ಗಣೇಕಲ್, ದೇವರಾಜ್ ನಾಯಕ, ಸಿದ್ದಯ್ಯ ಸ್ವಾಮಿ, ಶಾಂತಕುಮಾರ್ ಹೊನ್ನಟಗಿ, ರಾಜಪ್ಪ ಸಿರವಾರಕರ್ ಇದ್ದರು. 
ಜಿಲ್ಲೆ

ಹೆದ್ದಾರಿ ಸಂಚಾರ ತಡೆದು ಆಕ್ರೋಶ

ರುದ್ರಪ್ಪ ವಾಲಿ

ದೇವದುರ್ಗ: ತಾಲೂಕಿನ ಕಲ್ಮಲಾ ತಿಂಥಣಿ ಬ್ರಿಡ್ಜ್ ರಾಜ್ಯ ಹೆದ್ದಾರಿಯ ಜಾಲಹಳ್ಳಿ ಹಾಗೂ ಕಾಕರಗಲ್ನಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಪ್ರಾರಂಭಿಸಿರುವ ಟೋಲ್ ಗೇಟ್ ರದ್ದುಪಡಿಸಲು ಆಗ್ರಹಿಸಿ ಕಾಕರಗಲ್ ಟೋಲ್ ಗೇಟ್ ಮುಂದೆ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು, ಮಂಗಳವಾರ ಹೆದ್ದಾರಿ ಸಂಚಾರ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದವು.

ರೈತ ಸಂಘದ ಗೌರವ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಮಾತನಾಡಿ, ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅವೈಜ್ಞಾನಿಕ ಹಾಗೂ ಅಂಧ ಆಡಳಿತದಿಂದ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ದೇವದುರ್ಗ ತಾಲೂಕಿನ ಜನರಿಗೆ ಸಂಕಷ್ಟ ಎದುರಾಗಿದೆ. ಸದರಿ ರಾಜ್ಯ ಹೆದ್ದಾರಿ ನಿರ್ಮಾಣ ಮಾಡಿ 13 ವರ್ಷ ಕಳೆದ ನಂತರ ಟೋಲ್ ಗೇಟ್ ನಿರ್ಮಾಣ ಮಾಡುತ್ತಿರುವುದು ಅಧಿಕಾರಿಗಳ ಬುದ್ಧಿಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತಾಲೂಕು ತುಳಿತಕ್ಕೆ ಒಳಗಾಗಿದೆ. ಇಲ್ಲಿ ಇನ್ನೂ ಅನಕ್ಷರತೆ, ಬಡತನ, ಗುಳೆ, ಅಪೌಷ್ಟಿಕ ತಾಂಡವಾಡುತ್ತಿದೆ. ಇಂಥ ಪ್ರದೇಶದಲ್ಲಿ ಟೋಲ್ ಗೇಟ್ ಯಾವ ಆಧಾರದಲ್ಲಿ ನಿರ್ಮಾಣ ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ. ಇದಕ್ಕೆ ಜನಪ್ರತಿನಿಧಿಗಳು ಮೌನವಾಗಿರುವ ಮೂಲಕ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಸರ್ಕಾರ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಮುಂದಿನ 15 ದಿನಗಳಲ್ಲಿ ಟೋಲ್ ಗೇಟ್ ತೆರವುಗೊಳಿಸಬೇಕು. ಇಲ್ಲದಿದ್ದರೆ ರೈತರು ಹಾಗೂ ಗ್ರಾಮೀಣ ಭಾಗದ ಜನರು ಸೇರಿಕೊಂಡು ಟೋಲ್ ಗೇಟ್ ಕಿತ್ತಿ ಎಸೆಯುತ್ತೇವೆ ಎಂದು ಎಚ್ಚರಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ್ ಪಾಟೀಲ್ ಇಂಗಳದಾಳ, ಮುಖಂಡರಾದ ಬೂದಯ್ಯ ಸ್ವಾಮಿ, ಸೂಗರಯ್ಯ ಸ್ವಾಮಿ, ವೆಂಕಪ್ಪ ಕಾರಬಾರಿ, ಲಿಂಗಾರೆಡ್ಡಿ ಪಾಟೀಲ್, ವೀರೇಶ ಗವಿಗಟ್, ರಮೇಶ್ ಅಬಕಾರಿ, ಹಾಜಿ ಮಸ್ತಾನ್ ಗಣೇಕಲ್, ದೇವರಾಜ್ ನಾಯಕ, ಸಿದ್ದಯ್ಯ ಸ್ವಾಮಿ, ಶಾಂತಕುಮಾರ್ ಹೊನ್ನಟಗಿ, ರಾಜಪ್ಪ ಸಿರವಾರಕರ್, ಬಸಪ್ಪ ಜಂಗ್ಲಿ, ಅಖಂಡ ದೇವದುರ್ಗ ಹೋರಾಟ ಸಮಿತಿ ಸಂಚಾಲಕ ಶಿವರಾಜ್ ನಾಯಕ ಕೊತ್ತದೊಡ್ಡಿ, ಮಾರ್ತಾಂಡ ಇತರರಿದ್ದರು.

ಕುಮಾರ ನಾಯಕ ಭರವಸೆ

ಟೋಲ್ ಗೇಟ್ ವಿರೋಧಿಸಿ ವಿವಿಧ ಸಂಘಟನೆಗಳು ನಡೆಸುತ್ತಿದ್ದ ಹೆದ್ದಾರಿ ಸಂಚಾರ ತಡೆ ಸ್ಥಳಕ್ಕೆ ಸಂಸದ ಜಿ.ಕುಮಾರ ನಾಯಕ್ ಭೇಟಿ ನೀಡಿ ಹೋರಾಟಗಾರರ ಜತೆ ಮಾತುಕತೆ ನಡೆಸಿದರು. ಸಮಸ್ಯೆ ಕುರಿತು ಅಧಿಕಾರಿಗಳ ಜತೆ ಮಾತನಾಡಿ ಟೋಲ್ ಗೇಟ್ ರದ್ದಿಗೆ ಪ್ರಯತ್ನಿಸುತ್ತೇನೆ. ಈ ಬಗ್ಗೆ ಸರ್ಕಾರಕ್ಕೂ ಪತ್ರ ಬರೆದು ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದ್ದರಿಂದ ಸಂಚಾರ ತಡೆ ವಾಪಸ್ ಪಡೆಯಲಾಯಿತು.

ಟ್ರಾಫಿಕ್ ಸಮಸ್ಯೆ ಪರ್ಯಾಯ ವ್ಯವಸ್ಥೆ

ಹೆದ್ದಾರಿ ಸಂಚಾರ ತಡೆ ಸುಮಾರು ಒಂದು ಗಂಟೆಗಳ ಕಾಲ ನಡೆದಿದ್ದರಿಂದ ಕಲ್ಮಲಾ ತಿಂಥಣಿ ಬ್ರಿಡ್ಜ್ ರಾಜ್ಯ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಯಿತು. ಕಾಕರಗಲ್ ಟೋಲ್ ಗೇಟ್‌ನಿಂದ ಗಬ್ಬೂರು ಹಾಗೂ ದೇವದುರ್ಗ ಮಾರ್ಗದ ವಾಹನಗಳು ಒಂದೂವರೆ ಗಂಟೆಗೂ ಹೆಚ್ಚು ಕಾಲ ಸಾಲುಗಟ್ಟಿ ನಿಂತಿದ್ದವು. ಸಂಚಾರ ತಡೆ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ದೇವದುರ್ಗದಿಂದ ಬರುವ ವಾಹನಗಳನ್ನು ಚಿಕ್ಕಹೊನ್ನಕುಣಿ ಕ್ರಾಸ್ ಮೂಲಕ ಸಿರವಾರ ಮಾರ್ಗವಾಗಿ ಕಳಿಸಲಾಯಿತು. ಇನ್ನು ಕೆಲವು ವಾಹನಗಳನ್ನು ಗಬ್ಬೂರಿನಲ್ಲಿ ಬೇರೆ ಮಾರ್ಗದ ಮೂಲಕ ಕಳಿಸಿದ್ದರಿಂದ ಅಷ್ಟೇನೂ ಸಮಸ್ಯೆ ಆಗಲಿಲ್ಲ.