ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಹಾಗೂ ನಗರದೊಳಗಿನ ಚತುಷ್ಪಥ ರಸ್ತೆಗಳಲ್ಲಿ ಮಳೆ ನೀರು ಸಂಗ್ರಹವಾಗಿ ವೇಗವಾಗಿ ವಾಹನಗಳು ಹೋಗುವ ಸಂದರ್ಭ ಕೆಸರು ನೀರು ವಿರುದ್ಧ ದಿಕ್ಕಿನಲ್ಲಿ ಬರುವ ವಾಹನಗಳ ಮೇಲೆ ಎರಚಲ್ಪಡುವುದರಿಂದ ಅಪಘಾತಕ್ಕೆ ಕಾರಣವಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿಯ ಬಹಳಷ್ಟು ಕಡೆಗಳಲ್ಲಿ ಮಳೆ ಬರುವಾಗ ನೀರು ಹರಿದು ಹೋಗದೆ ರಸ್ತೆಯಂಚಿನಲ್ಲಿ ಸಂಗ್ರಹಗೊಳ್ಳುತ್ತಿದೆ. ಹೆದ್ದಾರಿಗಳಲ್ಲಿ ನಿರಂತರವಾಗಿ ವೇಗವಾಗಿ ವಾಹನಗಳು ಸಾಗುತ್ತಿರುವುದು ಸಾಮಾನ್ಯ. ಈ ಸಂದರ್ಭ ಏಕಾಏಕಿ ವಾಹನಗಳ ಎದುರಿನ ಗಾಜಿನ ಮೇಲೆ ಏಕಾಏಕಿ ನೀರು ಚಿಮ್ಮಿದಾಗ ಚಾಲಕರು ಗಾಗಬರಿಗೊಂಡು ನಿಯಂತ್ರಣ ತಪ್ಪುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಹಲವು ಅಪಘಾತಗಳು ನಡೆದ ಉದಾಹರಣೆಗಳಿವೆ.
ಎಲ್ಲೆಲ್ಲಿ ನೀರು ಸಂಗ್ರಹ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕಂಪಾಡಿ ಬಳಿಯ ಎಂಸಿಎಫ್, ಪಣಂಬೂರು ಎನ್‌ಎಂಪಿಎ ಬಳಿ, ಬೈಕಂಪಾಡಿ, ಸುರತ್ಕಲ್, ಕುಂಟಿಕಾನ, ತೊಕ್ಕೊಟ್ಟು, ಪಂಪ್‌ವೆಲ್, ನಂತೂರು, ಕೂಳೂರು, ರಾಷ್ಟ್ರೀಯ ಹೆದ್ದಾರಿ 75 ರಲ್ಲೂ ಬಿ.ಸಿ.ರೋಡ್, ಫರಂಗಿಪೇಟೆ, ಪಡೀಲ್ ರೈಲ್ವೇ ಕೆಳ ಸೇತುವೆಯಡಿ ಮೊದಲಾದ ಕಡೆ ರಸ್ತೆಯಲ್ಲಿ ಮಳೆ ನೀರು ನಿಲ್ಲುತ್ತಿದೆ. ನಗರದೊಳಗೆ ಜೈಲು ರಸ್ತೆಯಿಂದ ಎಂ.ಜಿ. ರಸ್ತೆಗೆ ಸೇರುವಲ್ಲಿ, ಬಳ್ಳಾಲ್‌ಭಾಗ್, ಚಿಲಿಂಬಿ, ಕಂಕನಾಡಿ ಮೊದಲಾದ ಕಡೆ ನೀರು ನಿಲ್ಲುತ್ತಿದೆ. ಇದರಿಂದ ದ್ವಿ ಚಕ್ರ ವಾಹನಗಳಲ್ಲಿ ಸಂಚರಿಸುವವರಿಗೆ, ಪಾದಚಾರಿಗಳಿಗೂ ಕೆಸರು ನೀರು ಎರಚುತ್ತಿದೆ.
ಹೊಂಡಗಳಿಗೆ ಸಿಗದ ಮುಕ್ತಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿರುವ ಬೃಹತ್ ಹೊಂಡಗಳಿಗೆ ಮುಕ್ತಿ ಸಿಕ್ಕಿಲ್ಲ. ಈಗಾಗಲೇ ಒಂದೂವರೆ ತಿಂಗಳಿನಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೂಳೂರುನಿಂದ ಸುರತ್ಕಲ್ ತನಕ ಪ್ರಾಣ ಭೀತಿಯಿಂದ ಸಂಚರಿಸುವಂತಾಗಿದೆ. ಕೂಳೂರು ಸೇತುವೆಯಲ್ಲೂ ಡಾಂಬರು, ಕಾಂಕ್ರೀಟು ಕಿತ್ತು ಹೋಗಿ ಸರಳುಗಳು ಕಾಣಿಸುತ್ತಿವೆ. ಪ್ರತಿ ದಿನ ಸಂಜೆಯ ವೇಳೆ ತಾಸುಗಟ್ಟಲೆ ವಾಹನ ದಟ್ಟಣೆ ಉಂಟಾಗಿ ಆಂಬ್ಯುಲೆನ್ಸ್‌ಗಳ ಪರದಾಟ ಸಾಮಾನ್ಯವಾಗಿದೆ. ತುರ್ತು ಪ್ರಯಾಣಿಸುವ ಪ್ರಯಾಣಿಕರು ವಿಳಂಬವಾಗಿ ನಿಗದಿತ ಸ್ಥಳಗಳಿಗೆ ತಲುಪುವಂತಾಗಿದೆ. ನಗರದ ಒಳಗೂ ಒಳ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸಂಚಾರಕ್ಕೆ ದುಸ್ತರವಾಗಿದೆ.
ರಸ್ತೆಯಲ್ಲಿ ನೀರು ನಿಂತು ವಾಹನಗಳು ಹೋಗುವಾರ ಕೆಸರು ನೀರು ಎರಚಲ್ಪಡುವುದು ಗಮನಕ್ಕೆ ಬಂದಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ವೇಗ ಹೆಚ್ಚಾಗಿರುವುದರಿಂದ ಅಪಾಯಕಾರಿಯಾಗಿದೆ. ಸರಿಪಡಿಸಲು ಪಾಲಿಕೆಯಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪತ್ರ ಬರೆದು ಒತ್ತಾಯಿಸಲಾಗುವುದು.
ಸುಧೀರ್ ಶೆಟ್ಟಿ ಕಣ್ಣೂರು
ಮೇಯರ್