ಜಿಲ್ಲೆ

ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ

ಎ. ಆರ್. ರಘುರಾಮ

ಹಿರೀಸಾವೆ : ಹೆದ್ದಾರಿ ಅಂಡರ್ ಪಾಸ್ ಹಾಗೂ ಸರ್ವಿಸ್ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ರೀತಿಯ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮತ್ತು ಸಾರ್ವಜನಿಕರು ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಶ್ರೀಕಂಠಯ್ಯ ವೃತ್ತದಿಂದ ಪ್ರಾರಂಭಿಸಿ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ಸಾಗಿತು. ಈ ಭಾಗದ ಎರಡೂ ಕಡೆ ಸರ್ವಿಸ್ ರಸ್ತೆ ಪೂರ್ಣಗೊಳ್ಳದ ಪರಿಣಾಮ ಪ್ರತಿ ನಿತ್ಯ ಅಪಘಾತಗಳು ನಡೆಯುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಅಂಡರ್‌ಪಾಸ್ ಕೆಳಭಾಗದಲ್ಲಿ ಡಾಂಬರ್ ಹಾಕಿಲ್ಲ. ಸರ್ವಿಸ್ ರಸ್ತೆ ನಿರ್ಮಾಣ ಆಗಿರುವ ಕೆಲವು ಕಡೆ ಚರಂಡಿ ಮೇಲಿನ ಸಿಮೆಂಟ್ ಸ್ಲ್ಯಾಬ್‌ಗಳು ಮುರಿದು ಬಿದ್ದಿವೆ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಎಚ್.ಕೆ.ರಘು, ಕರವೆ ಮಹೇಶ್, ಯೋಗೇಶ್ ಹಾಗೂ ಪ್ರಗತಿವಾಸು ಅವರು ಕಾಮಗಾರಿ ಗುತ್ತಿಗೆಯ ಕಂಪನಿ ಅಧಿಕಾರಿ ವೆಂಕಟಕೃಷ್ಣ ಮತ್ತು ಡಿವೈಎಸ್ಪಿ ರವಿಪ್ರಸಾದ್ ಗಮನಕ್ಕೆ ತಂದರು.
ಸರ್ವಿಸ್ ರಸ್ತೆ ಹೊರತುಪಡಿಸಿ ಉಳಿದ ಕೆಲಸಗಳನ್ನು ಒಂದು ವಾರದಲ್ಲಿ ಮಾಡಿಕೊಡುವುದಾಗಿ ಕಂಪನಿಯ ಅಧಿಕಾರಿಗಳು ಭರವಸೆ ನೀಡಿದರು. ಈ ವೇಳೆ ಸರ್ವಿಸ್ ರಸ್ತೆ ನಿರ್ಮಾಣದ ಬಗ್ಗೆ ಎನ್‌ಎಚ್‌ಐ ನ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಾಹಿತಿ ನೀಡಬೇಕು ಎಂದು ಸಂಘಟನೆಗಳ ಕಾರ್ಯಕರ್ತರು ಪಟ್ಟು ಹಿಡಿದರು.
ಅಂಡರ್ ಪಾಸ್ ಬಳಿ ಆಗಮಿಸಿದ ಎನ್‌ಎಚ್‌ಎಐ ಅಧಿಕಾರಿಗಳಾದ ಹರಿಕೃಷ್ಣ ಮತ್ತು ಶಿವಪ್ರಕಾಕಾಶ್‌ಗೆ ಮುಖಂಡರು ಸಮಸ್ಯೆ ವಿವರಿಸಿದರು.
ನಿಧಾನಗತಿಯಲ್ಲಿ ನಡೆಯುತ್ತಿರುವ ಕಾಮಗಾರಿ ಮತ್ತು ಸರ್ವಿಸ್ ರಸ್ತೆ ನಿರ್ಮಾಣದಿಂದ ಸ್ಥಳೀಯರಿಗೆ ಆಗುತ್ತಿರುವ ಸಮಸ್ಯೆ, ವಿದ್ಯುತ್ ಪರಿವರ್ತಕ ಸ್ಥಳಾಂತರ ಮಾಡದಿರುವುದು, ಬ್ಯಾಡರಹಳ್ಳಿ ಕ್ರಾಸ್ ಬಳಿ ಸರ್ವಿಸ್ ರಸ್ತೆ ಇಲ್ಲದಿರುವ ಬಗ್ಗೆ ಗಮನಕ್ಕೆ ತಂದರು.
ಕೆಲವು ತಾಂತ್ರಿಕ ತೊಂದರೆಗಳನ್ನು ನಿವಾರಿಸಿಕೊಂಡು ಇನ್ನೊಂದು ತಿಂಗಳೊಳಗೆ ಸರ್ವಿಸ್ ರಸ್ತೆ ನಿರ್ಮಾಣ ಸೇರಿದಂತೆ ಎಲ್ಲ ಕಾಮಗಾರಿಗಳನ್ನೂ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ಸೆಸ್ಕ್‌ನ ಅಧಿಕಾರಿಗಳಾದ ವಜ್ರಕುಮಾರ್, ವೆಂಕಟೇಶ್, ಎಸ್‌ಐ ಸುಪ್ರೀತ್, ಬಾಳಗಂಚಿ ಗ್ರಾಪಂ ಅಧ್ಯಕ್ಷ ಗಂಗಾಧರ, ಮುಖಂಡರಾದ ಎಚ್.ಎಂ.ರಘು, ಶ್ರೀಧರ, ಆರ್.ಕೆ.ಮಂಜುನಾಥ್, ಡಿಶ್ ರಾಜು, ಮಂಜುನಾಥ್, ರಾಶಿಕ್ ಗೌಡ, ತೂಬಿಕಕೆರೆ ಬಾಲಕೃಷ್ಣ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಜರಿದ್ದರು.