ವಿಜಯವಾಣಿ ಸುದ್ದಿಜಾಲ
ರಾಮನಗರ: ಅಬ್ಬಾ ಕಳ್ಳರು ಏನೆಲ್ಲಾ ಕೈ ಚಳ ತೋರಿ ಬಿಡುತ್ತಾರೆ?.. ಮನೆ ಬಾಗಿಲು ಮುರಿದು ಕಳವು ಮಾಡುವುದು ಸಾಮಾನ್ಯವಾಗಿ ಹೋಗಿದೆ. ಆದರೆ ಹಾಕಿರುವ ಕಬ್ಬಿಣದ ಬೇಲಿಯನ್ನೇ ಕದ್ದರೆ ಹೇಗೆ?
ರಾಮನಗರದಲ್ಲಿ ಇಂತಹ ಘಟನೆ ನಡೆದಿದೆ. ಹೆದ್ದಾರಿಯ ಸರ್ವಿಸ್ ರಸ್ತೆಯ ವಿಭಜಕವಾಗಿ ಹಾಕಲಾಗಿದ್ದ ಕಬ್ಬಿಣದ ಮೆಷ್‌ನ ಬೇಲಿ, ಪೈಪುಗಳನ್ನೇ ಕಳವು ಮಾಡಲಾಗಿದ್ದು, ಪ್ರಕರಣ ರಾಮನಗರ ಟೌನ್ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ರಾಮನಗರ ನಡುವೆ ಹಾದು ಹೋಗಿರುವ ಬೆಂಗಳೂರು - ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275ರ ದಶ ಪಥ ಕಾಮಗಾರಿ ನಡೆಯುತ್ತಿದೆ. ಸರ್ವಿಸ್ ರಸ್ತೆಯನ್ನು ಹೆದ್ಧಾರಿಯಿಂದ ವಿಭಜಿಸುವ ಸಲುವಾಗಿ ಕಬ್ಬಿಣದ ಮೆಷ್‌ಗಳನ್ನು ಬಳಕೆ ಮಾಡಿ ಬೇಲಿಯನ್ನು ನಿರ್ಮಿಸಲಾಗುತ್ತಿದೆ. ಎಂದಿನಂತೆ ಹೆದ್ದಾರಿ ಕಾಮಗಾರಿ ಪರಿಶೀಲನೆ ಮಾಡಲು ಹೋದ ಕಾಮಗಾರಿ ಗುತ್ತಿಗೆ ಪಡೆದುಕೊಂಡಿರುವ ಡಿಬಿಎಲ್ ಕಂಪನಿಯ ಲೈಜನಿಂಗ್ ಆಫೀಸರ್ ಸಿ.ಕೆ.ಆದರ್ಶ್ ಅವರಿಗೆ ಹೆದ್ದಾರಿಗೆ ಹಾದು ಹೋಗಿರುವ ಗ್ರಾಮಗಳಾದ ದೇವರಸೇಗೌಡನದೊಡ್ಡಿ ಮತ್ತು ಕೊಂಕಾಣಿದೊಡ್ಡಿ ಬಳಿ ಬೇಲಿಯೇ ಕಳ್ಳತನವಾಗಿರುವುದು ಕಂಡು ಬಂದಿದೆ. ಪರಿಶೀಲನೆ ಮಾಡಲಾಗಿ, ಮೆಷ್, ಪೈಪ್‌ಗಳು ಸೇರಿದಂತೆ ಒಟ್ಟು 4.90 ಲಕ್ಷ ರೂ ಮೌಲ್ಯದ ವಿವಿಧ ವಸ್ತುಗಳು ಕಳುವಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.