ಜಿಲ್ಲೆ

ಹೆದ್ದಾರಿ ವಿಸ್ತರಣೆ ನನೆಗುದಿಗೆ

ಇಂದಿರಾ ಎನ್ ಕೆ

ರಾಘವೇಂದ್ರ ಪೈ ಕುಂದಾಪುರ ಶಿವಮೊಗ್ಗ ಮತ್ತು ಕುಂದಾಪುರ ರಾಜ್ಯ ಹೆದ್ದಾರಿ ವಿಸ್ತರಣೆ ಬೇಡಿಕೆ ನನೆಗುದಿಗೆ ಬಿದ್ದಿದೆ. ಎಲ್ಲೆಡೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದರೂ, ಈ ರಸ್ತೆ ಇಂದಿಗೂ ಗತಕಾಲದಲ್ಲೇ ಇದ್ದು ಸಾರ್ವಜನಿಕರ ಅಸಾಮಾಧಾನಕ್ಕೆ ಕಾರಣವಾಗಿದೆ. ಹೆದ್ದಾರಿ ವಿಸ್ತರಣೆ ಬೇಡಿಕೆ ಈಡೇರಿಕೆಗಾಗಿ ಹೋರಾಟ ನಡೆಸಲು ನಾಗರಿಕರು ಸಿದ್ಧತೆ ನಡೆಸಿದ್ದಾರೆ. ಕುಂದಾಪುರ-ಶಿವಮೊಗ್ಗ ರಾಜ್ಯ ಹೆದ್ದಾರಿ ಒಟ್ಟು 93 ಕಿ.ಮೀ. ದೂರ ಹೊಂದಿದೆ. ಕಳೆದ 4 ದಶಕಗಳಿಂದ ರಸ್ತೆ ಅಭಿವೃದ್ಧಿಯನ್ನೇ ಕಂಡಿಲ್ಲ. ಸಂಚಾರ ದಟ್ಟಣೆ ಹೆಚ್ಚಾಗಿರುವ ಕಾರಣ ಅಗಲ ಕಿರಿದಾದ ರಸ್ತೆಯಲ್ಲಿ ಅಪಘಾತಗಳು ಹೆಚ್ಚುತ್ತಿವೆ. ಹೆದ್ದಾರಿ ನಡುವೆ ಸಿಗುವ ವಾರಾಹಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಕಂಡ್ಲೂರು ಸೇತುವೆ ಕುಸಿತ ಭೀತಿಯಲ್ಲಿದೆ. ಕುಂದಾಪುರ-ಶಿವಮೊಗ್ಗ ರಾಜ್ಯ ಹೆದ್ದಾರಿ ಅಭಿವೃದ್ಧಿಯಾದಲ್ಲಿ ದಕ್ಷಿಣ ಕರ್ನಾಟಕಕ್ಕೆ ಪ್ರಮುಖ ಸಂಪರ್ಕ ಕೊಂಡಿ ಒದಗಿದಂತಾಗುತ್ತದೆ. ಮಂತ್ರಾಲಯ, ಬಳ್ಳಾರಿ, ರಾಯಚೂರು, ಹೈದರಾಬಾದ್ ಸಹಿತ ದಕ್ಷಿಣದ ಪ್ರದೇಶಗಳ ಪ್ರವಾಸೋದ್ಯಮಕ್ಕೂ ಬಲ ಸಿಗುತ್ತದೆ. ಬೈಂದೂರು ವ್ಯಾಪ್ತಿಯ ಪ್ರಮುಖ ಬೀಚ್‌ಗಳಿಗೆ ನಿಕಟ ಸಂಪರ್ಕ ಸಿಗಲಿದೆ ಎಂಬುದು ಹೆದ್ದಾರಿ ಹೋರಾಟ ಸಮಿತಿಯ ಅಭಿಮತ. *ಇಕ್ಕಟ್ಟು-ಬಿಕ್ಕಟ್ಟು: ಶಿವಮೊಗ್ಗ ಸಂಧಿಸುವ ಹೆದ್ದಾರಿ ತೀರಾ ಇಕ್ಕಟ್ಟಿನಿಂದ ಕೂಡಿದೆ. ಅಗಲ ಕಿರಿದಾಗಿರುವುದು, ಹೆಚ್ಚುತ್ತಿರುವ ವಾಹನ ದಟ್ಟಣೆ, ಪೇಟೆಗಳು ಬೆಳವಣಿಗೆಯ ಹಿನ್ನೆಲೆಯಲ್ಲಿ ಘನ ವಾಹನಗಳು ಸಂಚರಿಸಲು ತಡಕಾಡುವಂತಾಗಿದೆ. ಗತಕಾಲದಿಂದಲೂ ಇರುವ ಹಿಂದಿನ 25 ಮೀಟರ್ ಅಗಲದ ಹೆದ್ದಾರಿ ಈಗಲೇ ಅಷ್ಟೇ ಇದೆ. ದುಪ್ಪಟ್ಟು ವಾಹನಗಳ ಓಡಾಟ, ಹಿಂದಿಗಿಂತ ಹೆಚ್ಚು ವಾಣಿಜ್ಯ ವಹಿವಾಟು, ವಿದ್ಯಾಲಯ ಸಹಿತ ಇತರ ಬೆಳವಣಿಗೆಗಳು ಆಗಿದ್ದರೂ ರಸ್ತೆ ಮಾತ್ರ ಅಭಿವೃದ್ಧಿ ಕಂಡಿಲ್ಲ.

ಚತುಷ್ಪಥಕ್ಕೆ ಬೇಡಿಕೆ

ಜಿಲ್ಲೆಯ ಬಹುತೇಕ ಹೆದ್ದಾರಿಗಳು ಮೇಲ್ದರ್ಜೆಗೇರಿವೆ. ಬೈಂದೂರು-ರಾಣೆಬೆನ್ನೂರು, ಹೆಮ್ಮಾಡಿ-ಕೊಲ್ಲೂರು ರಸ್ತೆಗಳು ರಾಷ್ಟ್ರೀಯ ಹೆದ್ದಾರಿಯಾಗಿ ವಿಸ್ತರಣೆಗೊಂಡಿವೆ. ಕೋಟೇಶ್ವರ-ಹಾಲಾಡಿ-ವಿರಾಜಪೇಟೆ ಹೆದ್ದಾರಿಯೂ ಅಗಲೀಕರಣವಾಗಿದೆ. ಆದರೆ ಕುಂದಾಪುರ- ಶಿವಮೊಗ್ಗ ರಾಜ್ಯ ಹೆದ್ದಾರಿ ಮಾತ್ರ ಅಭಿವೃದ್ಧಿಯಾಗಿಲ್ಲ. ಈ ರಾಜ್ಯ ಹೆದ್ದಾರಿ ಕಮಲಶಿಲೆ, ಹೊರನಾಡು, ಕೊಲ್ಲೂರು, ಧರ್ಮಸ್ಥಳ, ಸುಬ್ರಹ್ಮಣ್ಯ, ಕ್ರೋಢ ಶಂಕರನಾರಾಯಣ ಇನ್ನಿತರ ಪುಣ್ಯ ಕ್ಷೇತ್ರಗಳನ್ನು ಸಂಧಿಸುತ್ತದೆ. ಕರ್ನಾಟಕ ರಾಜ್ಯ ಹೆದ್ದಾರಿ ಯೋಜನೆಯಡಿ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ನಿಧಿಯಿಂದ ಉತ್ತರದಲ್ಲಿ ರಾಜ್ಯ ಹೆದ್ದಾರಿಗಳನ್ನು ನಾಲ್ಕು ಪಥಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ಕುಂದಾಪುರ- ಶಿವಮೊಗ್ಗ ರಾಜ್ಯ ಹೆದ್ದಾರಿಯನ್ನು ಚತುಷ್ಪಥಗೊಳಿಸಬೇಕು ಅಥವಾ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ಕುಂದಾಪುರ, ಶಿವಮೊಗ್ಗ, ಬೆಂಗಳೂರು ಸಂಪರ್ಕಿಸುವ ಪ್ರಮುಖ ಹೆದ್ದಾರಿ ಇದಾಗಿದ್ದರೂ ಈವರೆಗೆ ಅಭಿವೃದ್ಧಿ ಕಂಡಿಲ್ಲ. ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದ ನಾಗರಿಕರು ಜೀವ ಕೈಯಲ್ಲಿ ಹಿಡಿದು ಪಯಣಿಸಬೇಕಾಗಿದೆ. ನಾಲ್ಕು ದಶಕಗಳಿಂದ ಅಭಿವೃದ್ಧಿ ಕಾಣದ ಈ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಬೇಕೆಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಸಹಿತ ವಿಧಾನ ಪರಿಷತ್ ಸದಸ್ಯರು, ಶಾಸಕರು, ಸಂಸದರಿಗೆ ಮನವಿ ಸಲ್ಲಿಸಿದ್ದೇವೆ. ಮಿಥುನ್ ಶೆಟ್ಟಿ ಸಟ್ಟಾಡಿ, ಹೆದ್ದಾರಿ ಹೋರಾಟ ಸಮಿತಿ ಪ್ರಮುಖ