ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಹೆಮ್ಮಾಡಿ ತಲ್ಲೂರು ನಡುವಿನ ರಾಜಾಡಿ ಬಳಿ ರಾಷ್ಟ್ರೀಯ ಹೆದ್ದಾರಿ 66ರ ರಸ್ತೆ ವಿಭಾಜಕ ಒಡೆದು ಅವೈಜ್ಞಾನಿಕ ತಿರುವಿಗೆ ಅವಕಾಶ ನೀಡಲಾಗಿದೆ. ಅಲ್ಲದೆ ತಲ್ಲೂರು ಹಾಗೂ ಹೆಮ್ಮಾಡಿ ಕಡೆಯಿಂದ ರಸ್ತೆ ಇಳಿಜಾರು ಮತ್ತು ನೇರವಾಗಿರುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಅಧಿಕವಾಗಿದೆ.
ಸೂಪರ್ ಫಾಸ್ಟ್ ಹೆದ್ದಾರಿ ಕಾಮಗಾರಿ ಆರಂಭದಿಂದಲೂ ಹಲವು ವಿಘ್ನ ನಿವಾರಿಸಿ ರಸ್ತೆ ನಿರ್ಮಿಸಲಾಗಿದ್ದರೂ ಇನ್ನೂ ಕೆಲವು ಕಡೆ ಅಪೂರ್ಣವಾಗಿದೆ. ಹೆದ್ದಾರಿಯಲ್ಲಿ ಡೈವರ್ಶನ್, ವಾಹನ ಸಂಚಾರಕ್ಕೆ ಕೆಲವೊಂದು ಕಟ್ಟುಪಾಡಿದೆ. ಆದರೆ ಜನ ತಮ್ಮ ಅನುಕೂಲಕ್ಕೆ ತಕ್ಕಂತೆ ಡೈವರ್ಶನ್ ಬೇಕು ಎಂದು ಪ್ರತಿಭಟನೆ ನಡೆಸಿ ದಕ್ಕಿಸಿಕೊಂಡಿದ್ದರು. ವಿಭಾಜಕ ಇದ್ದರೂ ವಾಹನಗಳು ಏಕಮುಖ ಸಂಚಾರದಿಂದ ಕುಂದಾಪುರದಿಂದ ಮರವಂತೆವರೆಗೆ ಐವರು ಪ್ರಾಣ ಕಳೆದುಕೊಂಡಿದ್ದು, ಏಕಮುಖ ಸಂಚಾರವೇ ಸಾವಿಗೆ ಕಾರಣವಾಗಿದೆ.
ಅಲ್ಲದೆ ಇಲ್ಲಿ ರಸ್ತೆ ವಿಭಾಜಕ ವಾಹನ ಚಾಲಕರ ಗಮನಕ್ಕೆ ಬರುತ್ತಿಲ್ಲ. ಜೀಬ್ರಾ ಮಾರ್ಕ್, ಪ್ರತಿಫಲನ ದೀಪ, ಪಟ್ಟಿ ಯಾವುದೂ ಇಲ್ಲ. ಪ್ರಸ್ತುತ ರಾಜಾಡಿ ಬಳಿ ರಸ್ತೆ ಒಡೆಯಲಾಗಿದೆ. ಇದರಿಂದ ಪ್ರೇರಿತರಾಗಿ ಮತ್ತಷ್ಟು ಕಡೆ ರಸ್ತೆ ಒಡೆದರೆ ಯಾರು ಹೊಣೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ಫುಟ್‌ಪಾತ್ ಮೇಲೆ ಕಾರು ಪಾರ್ಕಿಂಗ್!
ಕುಂದಾಪುರ ಶಾಸ್ತ್ರಿ ವೃತ್ತದಷ್ಟೇ ಕೋಟೇಶ್ವರ ಜಂಕ್ಷನ್‌ನಲ್ಲೂ ವಾಹನ, ಪಾದಚಾರಿಗಳ ದಟ್ಟಣೆ ಇರುತ್ತದೆ. ಕೋಟೇಶ್ವರ ಅಂಡರ್‌ಪಾಸ್ ಎರಡೂ ಬದಿಯಲ್ಲಿ ಸರ್ವೀಸ್ ರಸ್ತೆಯಿದ್ದು, ಒಳಚರಂಡಿ ಮಾಡಿ ರಸ್ತೆ ಪಾದಚಾರಿ ಸಂಚಾರಕ್ಕೆ ಫುಟ್‌ಪಾತ್ ನಿರ್ಮಿಸಿದ್ದರೂ ರಸ್ತೆಯಲ್ಲೇ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಕಾರಣ ಇಲ್ಲಿನ ಫುಟ್‌ಪಾತನ್ನು ಒತ್ತುವರಿ ಮಾಡಿ ಕಬ್ಬಿಣದ ಗ್ರಿಲ್ ಅಳವಡಿಸಿ ಶಾಶ್ವತ ಕಾರು ಪಾರ್ಕಿಂಗ್ ಮಾಡಲಾಗಿದೆ. ಆದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾಗಲಿ, ಕೋಟೇಶ್ವರ ಗಾಮ ಪಂಚಾಯಿತಿ ಆಗಲಿ ಬಾಯಿ ಮುಚ್ಚಿ ಕೂರುವ ಮೂಲಕ ಒತ್ತುವರಿದಾರರ ರಕ್ಷಣೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ. ಕೋಟೇಶ್ವರ ಜಂಕ್ಷನ್ ಬಳಿ ಒಂದು ಕಡೆ ಪೇಟೆಗೆ ಹೋಗಲೂ ಮತ್ತೊಂದು ಕಡೆ ಹಾಲಾಡಿಗೆ ಹೋಗಲು ಸರ್ವೀಸ್ ರಸ್ತೆ ಮಾಡಲಾಗಿದೆ. ಪೇಟೆಯಿಂದ ಬರುವ ವಾಹನ, ಪಾದಚಾರಿಗಳು ಅಂಡರ್‌ಪಾಸ್ ಮೂಲಕ ಕ್ರಾಸ್ ಮಾಡಿದರೆ, ಕುಂದಾಪುರ ಕಡೆಯಿಂದ ಬರುವ ವಾಹನ ಕೋಟೇಶ್ವರ ಜಂಕ್ಷನ್ ಸರ್ವೀಸ್ ರಸ್ತೆ ಮೂಲಕ ಹೋಗಬೇಕು. ಸರ್ವೀಸ್ ರಸ್ತೆಯಲ್ಲೂ ಹೆದ್ದಾರಿಯಷ್ಟೇ ವಾಹನ ದಟ್ಟಣೆಯಿದ್ದು, ಪಾದಚಾರಿಗಳು ರಸ್ತೆಗಿಳಿದರೆ ಅಪಾಯ ಕಟ್ಟಿಟ್ಟ ಬುತ್ತಿ.
ಅಪಾಯಕಾರಿ ಸರ್ವೀಸ್ ರಸ್ತೆ
ಕೋಟೇಶ್ವರ ಕುಂದಾಪುರ ನಡುವೆ ಇರುವ ಸರ್ವೀಸ್ ರಸ್ತೆ ಅತ್ಯಂತ ಅಪಾಯಕಾರಿಯಾಗಿದೆ. ಇಲ್ಲಿ ಸಂಚಾರಿ ನಿಯಮವೇ ಪಾಲನೆಯಾಗುತ್ತಿಲ್ಲ. ಕೋಟೇಶ್ವರ ಕುಂದಾಪುರ ನಡುವಿನ ಸರ್ವೀಸ್ ರಸ್ತೆಯಲ್ಲಿ ಇದೂವರಗೆ 10ಕ್ಕೂ ಹೆಚ್ಚು ಜನ ಪ್ರಾಣಕಳೆದುಕೊಂಡರೆ, ಸಣ್ಣಪುಟ್ಟ ಅಪಘಾತ ತಪ್ಪಿದ ದಿನವಿಲ್ಲ. ಇಂಥ ಅಪಾಯಕಾರಿ ರಸ್ತೆಯಲ್ಲಿ ವಾಹನ ಪಾರ್ಕಿಗ್ ಮಾಡುವ ಮೂಲಕ ಮತ್ತಷ್ಟು ಅಪಘಾತಕ್ಕೆ ಅವಕಾಶ ಮಾಡಲಾಗುತ್ತದೆ. ರಸ್ತೆ ಬದಿಯಿರುವ ಗ್ಯಾರೇಜ್‌ಗಳಿಗೆ ಸರ್ವೀಸ್ ರಸ್ತೆಯೇ ಅಂಗಳ. ಇನ್ನು ಬಾಡಿಗೆ ವಾಹನ ಕೂಡ ಸರ್ವೀಸ್ ರಸ್ತೆಯಲ್ಲಿ ಕಾಯುತ್ತಿರುತ್ತವೆ. ಇನ್ನೂ ಬಸ್ಸುಗಳು ಸೂಪರ್ ಫಾಸ್ಟ್ ಹೈವೇ ಮೇಲೆ ಕೈ ಅಡ್ಡಹಾಕಿದರೆ ಸಾಕು ನಿಲ್ಲಿಸಿ ಪ್ರಯಾಣಿಕರ ಏರಿಳಿಸುವ ಮೂಲಕ ಹೆದ್ದಾರಿ ಪ್ರಯಾಣ ಮತ್ತಷ್ಟು ಅಪಾಯಕಾರಿಯಾಗಿದೆ. ಹೆದ್ದಾರಿಯಲ್ಲಿ ಗುರುತು ಮಾಡಿದಲ್ಲೇ ನಿಲ್ಲಬೇಕು ಎನ್ನುವ ನಿಯಮ ಬಸ್‌ಗೆ ಅನ್ವಯವಾಗುವುದಿಲ್ಲ.
ಕುಂದಾಪುರ ಶಾಸ್ತ್ರಿ ವೃತ್ತ ಬಳಿ ನಡೆಯುತ್ತಿರುವ ಫ್ಲೈ ಓವರ್ ಕೆಲಸ ಮುಗಿದು ಸಂಚಾರಕ್ಕೆ ಮುಕ್ತವಾದ ನಂತರ ಸಮಸ್ಯೆ ಪರಿಹಾರದ ನಿರೀಕ್ಷೆಯಿದೆ. ಟ್ರಾಫಿಕ್ ನಿಯಮ, ಸರ್ವೀಸ್ ರಸ್ತೆಯಲ್ಲಿ ವಾಹನ ಪಾರ್ಕಿಂಗ್, ಒತ್ತುವರಿ ಬಗ್ಗೆ ಕುಂದಾಪುರ ಡಿಎಸ್ಪಿ ಹಾಗೂ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ರಸ್ತೆ ಸುರಕ್ಷತೆ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕುಂದಾಪುರ ಫ್ಲೈಓವರ್ ಕಾಮಗಾರಿ ಸಂಪೂರ್ಣವಾದ ನಂತರ ಪೊಲೀಸ್ ಜತೆ ಕೋಟೇಶ್ವರ ಕುಂದಾಪುರ ತನಕ ರಸ್ತೆ ಸುರಕ್ಷತೆ ಡ್ರೈವ್ ಮಾಡುವ ಮೂಲಕ ಜಾಗೃತಿ ಮೂಡಿಸಿ, ಸಮಸ್ಯೆ ಸರಿಪಡಿಸಲಾಗುತ್ತದೆ.
ರಾಜು ಕೆ., ಉಪವಿಭಾಗಾಧಿಕಾರಿ, ಕುಂದಾಪುರ
ಕುಂದಾಪುರ ಫ್ಲೈ ಓವರ್ ಕಾಮಗಾರಿ ಸಂಪೂರ್ಣವಾದರೆ ಅರ್ಧ ಟ್ರಾಫಿಕ್ ಸಮಸ್ಯೆ ಪರಿಹಾರವಾಗಲಿದ್ದು, ಏ.1ಕ್ಕೆ ಕಾಮಗಾರಿ ಮುಗಿಯಬೇಕಿತ್ತು. ಕಾರಣಾಂತರಗಳಿಂದ ವಿಳಂಬವಾಗಿದೆ. ನವಯುಗ ಕಂಪನಿ ಇಂಜಿನಿಯರ್ ಕರೆದು ಸಭೆ ನಡೆಸಿದ್ದು, ಇನ್ನು ಹದಿನೈದು ದಿನದಲ್ಲಿ ಫ್ಲೈಓವರ್ ಬಿಟ್ಟುಕೊಡುತ್ತಾರೆ. ಫ್ಲೈಓವರ್ ಕೆಳಗೆ ವಾಹನ ಪಾರ್ಕಿಂಗ್ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ. ಕಾಮಗಾರಿ ಮುಗಿದು ಸಂಚಾರ ಮುಕ್ತವಾಗಲಿ. ಟ್ರಾಫಿಕ್ ಸಮಸ್ಯೆ ಪರಿಹಾರ ಮಾಡುತ್ತೇವೆ.
ಶ್ರೀಕಾಂತ್ ಡಿಎಸ್ಪಿ, ಕುಂದಾಪುರ