ಜಿಲ್ಲೆ

ಹೆದ್ದಾರಿ ಬದಿ ಡೆಕ್ ಕುಸಿತ

ಎ. ಆರ್. ರಘುರಾಮ

ಗುಂಡ್ಲುಪೇಟೆ : ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಡೆಕ್ ಕುಸಿದು ತಿಂಗಳಾದರೂ ಸರಿಪಡಿಸದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರು ಸುಲ್ತಾನ್ ಭತ್ತೇರಿ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಬದಿಯ ಪಟ್ಟಣದ ಮಡಹಳ್ಳಿ ವೃತ್ತದಲ್ಲಿ ಚರಂಡಿಗೆ ಅಳವಡಿಸಿದ್ದ ಡೆಕ್ ಕುಸಿದು ಆಪಾಯಕ್ಕೆ ಆಹ್ವಾನ ನೀಡುತ್ತಿದೆ. ಮಡಹಳ್ಳಿ, ಬರಗಿ, ಹೊಂಗಳ್ಳಿ ಮುಂತಾದ ಗ್ರಾಮಗಳ ಸಂಪರ್ಕ ರಸ್ತೆಯಾದ ಇದು ಅತ್ಯಂತ ಜನನಿಬಿಡ ಮಾರ್ಗವಾಗಿದೆ. ಕೆ.ಎಸ್.ನಾಗರತ್ನಮ್ಮ ಬಡಾವಣೆ, ಅಶ್ವಿನಿ ಬಡಾವಣೆ, ಕಲ್ಯಾಣ ಮಂಟಪಗಳು, ಶಾಲಾ ಕಾಲೇಜುಗಳು, ಪೊಲೀಸ್ ಠಾಣೆ ಹಾಗೂ ನ್ಯಾಯಾಲಯಗಳಿದ್ದು ಪ್ರತಿ ದಿನವೂ ಸಾವಿರಾರು ಜನರು ಸಂಚರಿಸುತ್ತಿದ್ದಾರೆ.
ಈ ರಸ್ತೆಯ ನಡುವೆ ಆರಂಭದಲ್ಲಿ ಸಣ್ಣದಾಗಿ ಕುಸಿದಿದ್ದ ಡೆಕ್ ಹೆದ್ದಾರಿಯಲ್ಲಿ ಸಾಗುವ ವಾಹನಗಳ ಭಾರದಿಂದ ದೊಡ್ಡಹೊಂಡವಾಗಿ ಪರಿಣಮಿಸಿದೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ಸವಾರರು, ಶಾಲಾ ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳು ತುಂಬಾ ತೊಂದರೆ ಎದುರಿಸುತ್ತಿದ್ದಾರೆ. ಮಳೆ ಬಿದ್ದಾಗ ಈ ಪ್ರದೇಶದಲ್ಲಿ ನೀರು ನಿಲ್ಲುವುದರಿಂದ ಡೆಕ್ ಕುಸಿದಿರುವ ಬಗ್ಗೆ ಅರಿವಿಲ್ಲದ ಸಾರ್ವಜನಿಕರು ಪದೇ ಪದೇ ಅಪಘಾತಕ್ಕೊಳಗಾಗುತ್ತಿದ್ದಾರೆ.
ಈ ಬಗ್ಗೆ ಸಾರ್ವಜನಿಕರು ಪುರಸಭೆಗೆ ಹಲವಾರು ಬಾರಿ ದೂರು ನೀಡಿದರೂ ಅವರು ಲೋಕೋಪಯೋಗಿ ಇಲಾಖೆಯ ಕಡೆಗೆ ಬೆರಳು ಮಾಡುತ್ತಿದ್ದಾರೆ. ಲೋಕೋಪಯೋಗಿ ಇಲಾಖೆಯವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದತ್ತ ಕೈತೋರಿಸಿ ಸುಮ್ಮನಾಗಿದ್ದಾರೆ. ರಾತ್ರಿ ವೇಳೆ ದೊಡ್ಡ ವಾಹನಗಳ ಕಣ್ಣುಕುಕ್ಕುವ ಬೆಳಕಿನಲ್ಲಿ ಡೆಕ್ ಕುಸಿದಿರುವ ಬಗ್ಗೆ ಅರಿವಿಲ್ಲದ ವಾಹನ ಸವಾರರು ಹಾಗೂ ಪಾದಚಾರಿಗಳು ಬಿದ್ದು ಅಪಘಾತಕ್ಕೊಳಲಾಗುತ್ತಿದ್ದಾರೆ.
ಇದರಿಂದ ಎಚ್ಚತ್ತ ಸಾರ್ವಜನಿಕರೇ ವಾಹನ ಸವಾರರ ಗಮನಕ್ಕೆ ಬರುವಂತೆ ಕುಸಿದ ಡೆಕ್ ಸುತ್ತ ಕಲ್ಲು ಹಾಗೂ ಮರಳಿನ ಚೀಲಗಳನ್ನು ಹಾಕಿದ್ದಾರೆ. ಆದರೂ ಸಂಬಂಧಪಟ್ಟವರು ಇದರ ರಿಪೇರಿಗೆ ಮುಂದಾಗದ ಪರಿಣಾಮ ಪೊಲೀಸರೇ ಇದರ ಸುತ್ತಲೂ ಬ್ಯಾರಿಕೇಡು ಅಳವಡಿಸಿ ವಾಹನಗಳು ಹಾಗೂ ಪಾದಚಾರಿಗಳು ಕುಸಿದ ಡೆಕ್ ಸಮೀಪಕ್ಕೆ ಹೋಗದಂತೆ ಕ್ರಮಕೈಗೊಂಡಿದ್ದಾರೆ.