ಮಡಿಕೇರಿ:
ಮೈಸೂರು-ಕುಶಾಲನಗರ ಎಕ್ಸ್ಪ್ರೆಸ್ ವೇ ಕಾಮಗಾರಿಯ ನಾಲ್ಕು ಪ್ಯಾಕೇಜ್ ಪೈಕಿ 3 ರಲ್ಲಿ ಕೆಲಸ ಶುರುವಾಗಿದೆ. 1 ಪ್ಯಾಕೇಜ್‌ಗೆ ಪರಿಸರಕ್ಕೆ ಸಂಬAಧಿಸಿದAತೆ ಕ್ಲಿಯರೆನ್ಸ್ ಬೇಕಾಗಿದೆ. ಅದು ಬಂದ ಕೂಡಲೇ ಅಲ್ಲಿಯೂ ಕಾಮಗಾರಿ ಶುರುವಾಗಲಿದೆ ಎಂದು ಕೊಡಗು-ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಲ್ಲಿನ ಪತ್ರಿಕಾ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೊಡಗಿಗೆ ರೈಲ್ವೆ ಸಂಪರ್ಕ ಕಲ್ಪಿಸಲು ಪ್ರಯತ್ನ ಮುಂದುವರಿದಿದೆ. ರಾಜ್ಯ ಸರ್ಕಾರ ಭೂ ಸ್ವಾದೀನ ಮಾಡಿ ಕೊಟ್ಟರೆ ಮುಂದಿನ ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ಬಜೆಟ್‌ನಲ್ಲಿ ಹಣ ಮೀಸಲಿಡಬೇಕಿತ್ತು. ಅದು ಆಗಲಿಲ್ಲ. ಜಿಲ್ಲೆಯ ಶಾಸಕರು ಈ ಬಗ್ಗೆ ಪ್ರಯತ್ನಿಸಬೇಕು. ರೈಲ್ವೆ ಮಾರ್ಗದಿಂದ ಕೊಡಗಿನ ಪ್ರಕೃತಿಗೆ ಹಾನಿ ಆಗುವುದಿಲ್ಲ. ಕುಶಾಲನಗರ ತನಕ ಮಾತ್ರ ರೈಲು ಬರುತ್ತದೆ.
ಕೊಡಗಿನಲ್ಲಿ ಏರ್‌ಸ್ಟಿçಪ್ ನಿರ್ಮಾಣಕ್ಕೆ 2 ಕಡೆ ಜಾಗ ಗುರುತಿಸಲಾಗಿದೆ. ಈ ಪೈಕಿ ಸೂಕ್ತ ಸ್ಥಳವನ್ನು ತಜ್ಞರು ಆಯ್ಕೆ ಮಾಡುತ್ತಾರೆ. ಮಡಿಕೇರಿ, ಕುಶಾಲನಗರ, ಸೋಮವಾರಪೇಟೆ ಹಾಗೂ ವಿರಾಜಪೇಟೆಗೆ ಕುಡಿಯುವ ನೀರಿನ ಪೂರೈಕೆಗಾಗಿ ಅಮೃತ್ 2 ಯೋಜನೆ ಅಡಿಯಲ್ಲಿ ಕೆಲಸ ನಡೆಯುತ್ತಿದೆ. ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಕಾಮಗಾರಿ ನಿರ್ವಹಿಸಲು ಸೂಚಿಸಲಾಗಿದೆ. ಬೇಸಿಗೆಯಲ್ಲಿ ಕೊಡಗಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಬAಧಿಸಿದ ಸಚಿವರ ಜತೆ ಚರ್ಚೆ ನಡೆಸಲಾಗುವುದು.
ಮಡಿಕೇರಿ ಸ್ಟೋನ್ ಹಿಲ್ ಬೆಟ್ಟದ ಮೇಲೆ ಸಂಗ್ರಹ ಆಗಿರುವ ಕಸ ಆದಷ್ಟು ಬೇಗ ತೆರವು ಮಾಡಲಾಗುವುದು. ಈಗ ಸಾಂಕೇತಿಕವಾಗಿ ಕೆಲಸ ಆರಂಭ ಆಗಿದೆ. ಕಸ ಸುರಿಯಲು ರಾಜ್ಯ ಸರ್ಕಾರ ಅರಣ್ಯ ಇಲಾಖೆ ಮೂಲಕ ಜಾಗದ ಸಮಸ್ಯೆ ಪರಿಹರಿಸಿಕೊಟ್ಟರೆ ಯೋಜನೆ ಬೇಗ ಕಾರ್ಯರೂಪಕ್ಕೆ ಬರಲಿದೆ. ಎಂಪಿ ಲಾಡ್ ನಿಧಿ 5 ಕೋಟಿ ರೂ. ಇದ್ದು, ಈ ನಿಧಿಯಿಂದ ಹಲವೆಡೆ ಕೆಲಸ ನಡೆಯುತ್ತಿದೆ. ಅಗತ್ಯ ಇರುವ ಕೆಲಸಗಳ ಮಾಹಿತಿ ಪಡೆದು ಆದ್ಯತೆ ಮೇಲೆ ಪರಿಹಾರ ಕಲ್ಪಿಸಲಾಗುತ್ತದೆ. ಹೆಚ್ಚುವರಿ ಎನ್‌ಡಿಆರ್‌ಎಫ್ ಫಂಡ್ ತರಲು ಕೂಡ ಪ್ರಯತ್ನ ನಡೆದಿದೆ.
ಮಡಿಕೇರಿಯ ಕೋಟೆಯನ್ನು ಪಾರಂಪರಿಕ ಆಸ್ತಿಯಾಗಿ ರಕ್ಷಿಸುವ ಅಗತ್ಯವಿದ್ದು, ಈ ಸಂಬAಧ ಪ್ರವಾಸೋದ್ಯಮ ಇಲಾಖೆ ಜತೆ ಚರ್ಚೆ ನಡೆಸಲಾಗುವುದು.
ಪ್ರಕೃತಿ ಕಾಳಜಿ ಇಟ್ಟುಕೊಂಡು ಕೆಲಸ ಮಾಡಲಾಗುವುದು. ಕೊಡಗಿನ ವಾತಾವರಣ ಅನುಭವಿಸಲು ಪ್ರವಾಸಿಗರು ಬರುತ್ತಾರೆ. ಹಾಗಾಗಿ ಇಂಥ ವಾತಾವರಣ ಉಳಿಸಿಕೊಳ್ಳಬೇಕು.
ಕೊಡಗಿನಲ್ಲಿ ಪ್ರಕೃತಿಗೆ ಆದ್ಯತೆ. ಈ ಕಾಳಜಿ ಇಟ್ಟುಕೊಂಡೇ ಮುಂದುವರಿಯಲಾಗುವುದು. ಅಗತ್ಯ ಇರುವ ಕಡೆಗಳಲ್ಲಿ ಸ್ಕೆöÊ ಲಿಫ್ಟ್ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ.
ಜೆಜೆಎಂ ಅನುಷ್ಠಾನ ನಮ್ಮ ಹೆಮ್ಮೆಯ ಯೋಜನೆ. ಹಾಗಾಗಿ ಜಲಜೀವನ್ ಮಿಷನ್ ಸಮಸ್ಯೆ ಪರಿಹರಿಸಲು ಆದ್ಯತೆ ಕೊಡಲಾಗಿದೆ. ಇದಕ್ಕಾಗಿ ಗ್ರಾ.ಪಂ. ಮಟ್ಟದಲ್ಲಿ ಪಕ್ಷದ ಸಂಘಟನೆ ಬಳಸಿಕೊಳ್ಳಲಾಗುವುದು. ಯೋಜನೆ ಜಾರಿ ವಿಷಯದಲ್ಲಿ ಅಧಿಕಾರಿಗಳು ರಾಜಕೀಯ ಮಾಡಬಾರದು. ರಾಜಕೀಯ ಮಾಡಲು ನಾವು ರಾಜಕಾರಣಿಗಳು ಇದ್ದೇವೆ. ಕಾರ್ಯಾಂಗ ಅದರ ಕೆಲಸ ಮಾಡಬೇಕು ಎಂದು ಹೇಳಿದರು.
ಕೊಡಗಿನಲ್ಲಿ ಅಸ್ಸಾಂ ಕಾರ್ಮಿಕರ ರೂಪದಲ್ಲಿ ಬಾಂಗ್ಲಾ ದೇಶೀಯರು ಕಾಣಿಸಿಕೊಳ್ಳುತ್ತಿರುವುದು ಗಂಭೀರ ವಿಷಯ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಗಮನ ಸೆಳೆಯಲಾಗುವುದು. ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್ ಸೇವೆ ಉತ್ತಮಪಡಿಸಲು ಇಸ್ರೋ ತಂತ್ರಜ್ಞಾನ ಬಳಸಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ. ವನ್ಯಜೀವಿ-ಮಾನವ ಸಂಘರ್ಷ ದೊಡ್ಡ ಸಮಸ್ಯೆ ಆಗಿದೆ. ವನ್ಯ ಜೀವಿಗಳ ಸಂಖ್ಯೆ ಹೆಚ್ಚಾಗಿದೆ ಕಾಡು ಅಷ್ಟೇ ಇದೆ. ರಾಜ್ಯದಲ್ಲಿ 294 ಕಿಮೀ ಅರಣ್ಯ ಗಡಿ ಇದೆ. ಈ ಭಾಗದಲ್ಲಿ ರೈಲ್ವೇ ಬ್ಯಾರಿಕೇಡ್ ಅಳವಡಿಕೆ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ ನಡೆಸಲಾಗಿದೆ. ಲಾಂಟಾನ ತೆಗೆಯಬೇಕು. ಬಿದಿರು, ಹುಲ್ಲು ಬೆಳೆಸಬೇಕು. ಕಾಡೊಳಗೆಯೇ ಪ್ರಾಣಿಗಳಿಗೆ ಆಹಾರ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ತೋಟದ ಆನೆಗಳ ಸಮಸ್ಯೆಗೂ ಪರಿಹಾರ ಸಿಗಬೇಕಿದೆ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನುಕಾರ್ಯಪ್ಪ ಇದ್ದರು.