ಜಿಲ್ಲೆ

ಹೆದ್ದಾರಿ ಅಭಿವೃದ್ಧಿಗೆ ಮಣ್ಣು ಪರೀಕ್ಷೆ ಆರಂಭ

ಸುನಿಲ್ ಪೊನ್ನೇಟಿ

ಮಡಿಕೇರಿ:

ಬಹುನಿರೀಕ್ಷಿತ ಮೈಸೂರು-ಮಡಿಕೇರಿ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಸಂಬಂಧ ಪೂರ್ವಸಿದ್ಧತೆಗಳು ಆರಂಭವಾಗಿದೆ. ಆದಷ್ಟು ಶೀಘ್ರ ಕಾಮಗಾರಿ ಆರಂಭ ಮಾಡುವ ಹಿನ್ನೆಲೆಯಲ್ಲಿ ಪೂರಕ ಚಟುವಟಿಕೆಗಳನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ಶುರುಮಾಡಿದೆ. ಯಾವುದೇ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಮಣ್ಣು ಪರೀಕ್ಷೆಯ ಜವಾಬ್ದಾರಿಯನ್ನು ತಮಿಳುನಾಡು ಮೂಲದ ಸಂಸ್ಥೆಯೊಂದಕ್ಕೆ ವಹಿಸಲಾಗಿದ್ದು, ಅದು ಈಗಾಗಲೇ ತನ್ನ ಕೆಲಸ ಶುರು ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿರುವ ಮೈಸೂರು-ಮಡಿಕೇರಿ ಎಕ್ಸ್‌ಪ್ರೆಸ್‌ವೇ ಹೆದ್ದಾರಿಯ ಭಾಗವಾಗಿರುವ ಮೈಸೂರು-ಕುಶಾಲನಗರ ನಡುವಿನ ಮೊದಲ ಹಂತದ ಕಾಮಗಾರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ಭರದ ಸಿದ್ಧತೆ ನಡೆಸಿದೆ. ಹಾಲಿ ಇರುವ ರಾಷ್ಟ್ರೀಯ ಹೆದ್ದಾರಿ ೨೭೫ಕ್ಕೆ ಸಮಾನಾಂತರಾವಾಗಿ ಈ ಎಕ್ಸ್‌ಪ್ರೆಸ್ ವೇ ನಿರ್ಮಾಣದ ಯೋಜನೆ ರೂಪಿಸಲಾಗಿದ್ದು, ಈ ನೂತನ ಹೆದ್ದಾರಿ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇಗೆ ಸಂಪರ್ಕ ಕಲ್ಪಿಸಲಿದೆ.

ಮೈಸೂರು-ಮಡಿಕೇರಿ ಎಕ್ಸ್‌ಪ್ರೆಸ್‌ವೇ ಮೊದಲ ಹಂತದಲ್ಲಿ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಿಂದ ಕೊಡಗಿನ ಕುಶಾಲನಗರ ಸಮೀಪದ ಬಸವನಹಳ್ಳಿ ತನಕ ನಿರ್ಮಾಣ ಆಗಲಿದೆ. ಹುಣಸೂರು, ಬೈಲಕುಪ್ಪೆ, ಕುಶಾಲನಗರ, ಸುಂಟಿಕೊಪ್ಪದಲ್ಲಿ ಬೈಪಾಸ್ ನಿರ್ಮಾಣವೂ ಯೋಜನೆಯಲ್ಲಿ ಸೇರಿದೆ.
ಇದಲ್ಲದೆ ಸೇತುವೆಗಳು, ಫ್ಲೈಓವರ್‌ಗಳು, ಅಂಡರ್‌ಪಾಸ್‌ಗಳನ್ನು ಕೂಡ ನಿರ್ಮಿಸುವ ಯೋಜನೆ ಇದೆ. ೪೫ ಸ್ಥಳಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸುವ ಪ್ರಸ್ತಾಪವೂ ಇದೆ. ಈ ಹಿನ್ನೆಲೆಯಲ್ಲಿ ಭೂಮಿಯ ಧಾರಣ ಸಾಮರ್ಥ್ಯ, ಮಣ್ಣಿನ ಸ್ಥಿತಿಗತಿ, ಉಪ ಮೇಲ್ಮೈ ಭೂ ಭೌತ ಸ್ಥಿತಿ ಸೇರಿದಂತೆ ಪೂರಕ ಅಂಶಗಳನ್ನು ತಿಳಿದುಕೊಳ್ಳುವ ಸಲುವಾಗಿ ಮಣ್ಣಿನ ಪರೀಕ್ಷೆ ನಡೆಸಲಾಗುತ್ತಿದೆ.

ತಮಿಳುನಾಡು ಮೂಲದ ಸಂಸ್ಥೆಯೊಂದು ಮಣ್ಣು ಪರೀಕ್ಷೆಯ ಜವಾಬ್ದಾರಿ ವಹಿಸಿಕೊಂಡಿದ್ದು, ಕಳೆದ ೨ ವಾರಗಳಿಂದ ಮಣ್ಣು ಪರೀಕ್ಷೆ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು ೧೩೦ ಸ್ಥಳಗಳಲ್ಲಿ ಮಣ್ಣು ಪರೀಕ್ಷೆ ಕೈಗೊಳ್ಳಲಾಗುವುದು ಎಂದು ಮಣ್ಣು ಪರೀಕ್ಷೆ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಕಂಪ್ಲಾಪುರ-ಬೇಕ್ಯಾ-ಆನೆಚೌಕೂರು ವ್ಯಾಪ್ತಿಯಲ್ಲಿ ಮಣ್ಣು ಪರೀಕ್ಷೆ ನಡೆಸಲಾಗುತ್ತಿದೆ.

ಭೂಮಿ ಕೊರೆಯುವ ಗ್ಯಾಲಕ್ಷಿ ಯಂತ್ರದ ಸಹಾಯದಿಂದ ಭೂಮಿಯನ್ನು ಸುಮಾರು ೩೦ ಮೀ. ಆಳದ ತನಕ ಕೊರೆಯಲಾಗುತ್ತದೆ. ಈ ಸಂದರ್ಭ ಮಣ್ಣಿನ ವಿಧವನ್ನು ವಿಶ್ಲೇಷಿಸಲಾಗುತ್ತದೆ. ಮೇಲ್ಮಣ್ಣಿನ ವಿಧ, ಮಣ್ಣಿನಲ್ಲಿ ಕಲ್ಲು ಮಿಶ್ರಣ, ಕೆಸರಿನ ಅಂಶ, ಮಣ್ಣು ಮತ್ತು ಭೂಮಿಯ ನೆಲದಲ್ಲಿ ಕಂಡು ಬರುವ ಬಂಡೆಗಳು ಮತ್ತಿತರ ವಿಷಯಗಳ ವಿಶ್ಲೇಷಣೆ ಮಣ್ಣು ಪರೀಕ್ಷೆ ವೇಳೆ ನಡೆಯುತ್ತದೆ.

ಪ್ರತಿ ಕೊರೆಯುವಿಕೆ ಸಂದರ್ಭದಲ್ಲಿ ಎದುರಾಗುವ ಮಣ್ಣಿನ ದೃಶ್ಯ ವರ್ಗೀಕರಣ ಭೂಮಿ ಕರೆಯುವ ಸಂದರ್ಭದಲ್ಲಿ ದಾಖಲಾಗುತ್ತದೆ. ನಂತರ ಪ್ರಯೋಗಾಲಯದಲ್ಲೂ ಪರೀಕ್ಷೆ ನಡೆಯುತ್ತದೆ. ಈ ಎಲ್ಲಾ ಪರೀಕ್ಷೆಗಳ ವಿವರವಾದ ವರದಿಯನ್ನು ಎನ್‌ಎಚ್‌ಎಐಗೆ ಸಲ್ಲಿಸಲಾಗುತ್ತದೆ. ಈ ವರದಿ ಯೋಜನಾ ವೆಚ್ಚವನ್ನು ಅಂತಿಮಗೊಳಿಸಲು ಅನುಕೂಲ ಆಗುತ್ತದೆ.