ವೇಣುವಿನೋದ ಕೆ.ಎಸ್.ಮಂಗಳೂರು
ಮಂಗಳೂರಿಗೆ ಹೊಸ ವರ್ತುಲ ರಸ್ತೆ ನಿರ್ಮಾಣ ಕಾರ್ಯಕ್ಕೆ ಎರಡು ವರ್ಷಗಳ ಹಿಂದೆಯೇ ಶಿಲಾನ್ಯಾಸ ನಡೆದಿದ್ದರೂ, ಮಾರ್ಗನಕ್ಷೆ ಇನ್ನೂ ಅಂತಿಮಗೊಳ್ಳುತ್ತಿಲ್ಲ.
ಮೂಲ್ಕಿಯಿಂದ ಪ್ರಾರಂಭಗೊಂಡು ಬಿ.ಸಿ.ರೋಡ್ ಮೂಲಕ ತಲಪಾಡಿ/ಕೋಟೆಕಾರು ಭಾಗಕ್ಕೆ ಬಂದು ಸೇರುವ ಪ್ರಸ್ತಾವಿತ ಬೈಪಾಸ್ ಹೆದ್ದಾರಿಯಲ್ಲಿ ಹಿಂದಿನ ಮೂರು ಆಯ್ಕೆಗಳನ್ನೂ ಹೆದ್ದಾರಿ ಸಚಿವಾಲಯ ರದ್ದುಗೊಳಿಸಿ ಹೊಸದಾಗಿ ಎರಡು ಆಯ್ಕೆಗಳನ್ನು ಸೂಚಿಸುವಂತೆ ತಿಳಿಸಿದೆ.
ನಗರ, ಪಟ್ಟಣಗಳ ಮೂಲಕ ಹಾದುಹೋಗುವ ಮಾರ್ಗನಕ್ಷೆಯಲ್ಲಿ ಭೂಸ್ವಾಧೀನ ಸಮಸ್ಯೆಗಳು ಹೆಚ್ಚು ಹಾಗೂ ವೆಚ್ಚದಾಯಕ ಎನ್ನುವ ಕಾರಣಕ್ಕೆ ಸಚಿವಾಲಯ ಅಂತಹ ಯೋಜನೆಗೆ ಅನುಮೋದನೆ ನೀಡುತ್ತಿಲ್ಲ, ಸಚಿವಾಲಯದ ಅಧಿಸೂಚನೆಯಂತೆ ಪ್ರಸ್ತುತ ಯೋಜನೆಗೆ ತಲಾ ಒಂದು ಬ್ರೌನ್‌ಫೀಲ್ಡ್ ಹಾಗೂ ಗ್ರೀನ್‌ಫೀಲ್ಡ್ ಮಾರ್ಗನಕ್ಷೆಗೆ (ಅಲೈನ್‌ಮೆಂಟ್) ಡಿಪಿಆರ್ ಮಾಡಲಾಗಿದೆ.
ಯೋಜನೆ ಘೋಷಣೆಯಾದಾಗ ಹಾಲಿ ರಸ್ತೆಯನ್ನೇ 45 ಮೀಟರ್‌ಗೆ ಅಗಲಗೊಳಿಸುವುದು, ಆ ರಸ್ತೆಗಳನ್ನೇ ಲಿಂಕ್ ಮಾಡಿ 77 ಕಿ.ಮೀ ಉದ್ದದ ಚತುಷ್ಪಥ ಹೆದ್ದಾರಿಯನ್ನಾಗಿ ಪರಿವರ್ತಿಸುವುದು ನಿಗದಿಯಾಗಿತ್ತು. ಆಗ ಸ್ತೂಪ್ ಕನ್ಸಲ್ಟೆನ್ಸಿ ಹಳೇ ಮಾರ್ಗನಕ್ಷೆಯಂತೆ ವಿಸ್ತೃತ ಯೋಜನಾ ವರದಿ ತಯಾರಿಸಿ, 2,800 ಕೋಟಿ ರೂ.ಅಂದಾಜು ವೆಚ್ಚದ ಕಾಮಗಾರಿಯನ್ನು ಯೋಜಿಸಿತ್ತು. ಇಂಜಿನಿಯರಿಂಗ್ ಪ್ರೊಕ್ಯೂರ್‌ಮೆಂಟ್ ಹಾಗೂ ಕನ್‌ಸ್ಟ್ರಕ್ಷನ್(ಇಪಿಸಿ) ಮಾದರಿಯಲ್ಲಿ ಯೋಜನೆ ಕಾರ್ಯಗತ ಮಾಡಲು ಉದ್ದೇಶಿಸಲಾಗಿತ್ತು.
ಹಿಂದಿದ್ದ ಮೂರು ಆಯ್ಕೆ: ಈ ಹಿಂದೆ ಮೂರು ಆಯ್ಕೆಗಳನ್ನು ಇರಿಸಲಾಗಿತ್ತು. ಮೂಲ್ಕಿ ರೈಲ್ವೇ ಸ್ಟೇಷನ್, ಪದ್ಮನೂರು, ಕಿನ್ನಿಗೋಳಿ, ಕಟೀಲು, ಪೊಳಲಿ, ಬಂಟ್ವಾಳ, ಮೂಳೂರು ಸಜಿಪ, ಕರಿಯಂಗಳ ಮೂಲಕ ತೊಕ್ಕೊಟ್ಟು.(62.4 ಕಿ.ಮೀ). ಮೂಲ್ಕಿ, ಕಿಲ್ಪಾಡಿ, ಅರಾಳ, ಅಗ್ರಾರ್, ಮೇಲ್ಕಾರ್, ಸಜಿಪ ನಡು, ಬೊಳಿಯಾರ್, ಮುಡಿಪು, ಅಸೈಗೋಳಿ, ಸೋಮೇಶ್ವರ(71.9 ಕಿ.ಮೀ) ಹಾಗೂ ಹೆಜಮಾಡಿ, ಏಳಿಂಜೆ, ತೋಡಾರ್, ಹೊಸಬೆಟ್ಟು, ನರಿಕೊಂಬು, ಮೇಲ್ಕಾರ್, ಇರಾ, ಬಾಳೆಪುಣಿ, ಸೋಮೇಶ್ವರ(69.4 ಕಿ.ಮೀ). ಮೊದಲೆರಡನ್ನು ಕೈ ಬಿಡಲಾಗಿದ್ದು ಕೊನೆಯದರಲ್ಲೂ ಕೆಲ ಮಾರ್ಪಾಡು ಮಾಡಲಾಗಿದೆ.
ಗ್ರೀನ್‌ಫೀಲ್ಡ್ ಹಾಗೂ ಬ್ರೌನ್ ಫೀಲ್ಡ್ ಎರಡೂ ಆಯ್ಕೆಯನ್ನು ಸಚಿವಾಲಯಕ್ಕೆ ಇರಿಸಿ, ಡಿಪಿಆರ್ ಸಲ್ಲಿಸಲಾಗುವುದು. ಸಚಿವಾಲಯದ ಆಯ್ಕೆ ಅಂತಿಮ. ಸದ್ಯ ಡಿಪಿಆರ್ ಪೂರ್ಣವಾಗದ ಕಾರಣ ವೆಚ್ಚ ಗೊತ್ತಾಗುವುದಿಲ್ಲ ಎಂದು ಎನ್‌ಎಚ್‌ಎಐ ಅಧಿಕಾರಿಗಳು ತಿಳಿಸಿದ್ದಾರೆ.
ನಗರದಿಂದಲೋ, ಹೊರಗೋ?: ಗ್ರೀನ್‌ಫೀಲ್ಡ್ ಎಂದರೆ ನಗರ ವ್ಯಾಪ್ತಿಯಿಂದ ಹೊರಗೆ ಬರುವ ಭೂಸ್ವಾಧೀನಕ್ಕೆ ಹೆಚ್ಚು ಸಮಸ್ಯೆಯಾಗದ ಪ್ರದೇಶಗಳನ್ನು ಒಳಗೊಂಡ ಮಾರ್ಗನಕ್ಷೆ. ಇಂತಹ ಮಾರ್ಗನಕ್ಷೆಗೆ ಈಗ ಸಚಿವಾಲಯ ಹೆಚ್ಚಿನ ಒತ್ತು ನೀಡುತ್ತಿದೆ. ಹೆಜ್ಮಾಡಿ, ಕವತ್ತಾರು, ಏಳಿಂಜೆ, ಕಲ್ಲಮುಂಡ್ಕೂರು, ತೋಡಾರು, ಇರುವೈಲು, ಪಂಜಿಕಲ್, ನರಿಕೊಂಬು, ಪಣೋಲಿಬೈಲ್, ಚೇಳೂರು, ಬಾಳೆಪುಣಿ, ಕಿನ್ಯ ಮೂಲಕ ಸೋಮೇಶ್ವರಕ್ಕೆ ಬಂದು ಸೇರುವುದು ಗ್ರೀನ್‌ಫೀಲ್ಡ್‌ನಲ್ಲಿದೆ. ಗ್ರೀನ್‌ಫೀಲ್ಡ್ ಮಾರ್ಗನಕ್ಷೆ ಮೂರು ಪ್ರಮುಖ ಸೇತುವೆ, ಎರಡು ರೈಲ್ವೇ ಮೇಲ್ಸೇತುವೆ, 2 ರೈಲ್ವೆ ಕೆಳಸೇತುವೆ, 2 ಕ್ಲೋವರ್ ಲೀಫ್ ಇಂಟರ್‌ಚೇಂಜ್, ಒಂದು ಫ್ಲೈಓವರ್(ನರಿಕೊಂಬು ಬಳಿ)ಒಳಗೊಂಡಿದೆ. ಬ್ರೌನ್ ಫೀಲ್ಡ್ ಎಂದರೆ ನಗರ, ಪಟ್ಟಣ ಮೂಲಕ ಹಾದುಹೋಗುವ ಮಾರ್ಗ. ಈಗಿ ಇರುವ ರಸ್ತೆಯನ್ನೇ ಅಭಿವೃದ್ಧಿಪಡಿಸುವುದು.