ಗೋಣಿಕೊಪ್ಪ: ಬಿಟ್ಟಂಗಾಲ ಸಮೀಪದ ವಿ.ಬಾಡಗದ ಹೈ ಫ್ಲೈಯರ್ಸ್ ಸಂಸ್ಥೆ ವತಿಯಿಂದ ವಿರಾಜಪೇಟೆ ತಾಲೂಕಿನ 3 ನಾಡುಗಳ ವ್ಯಾಪ್ತಿಯ ಕೊಡವ ಕೌಟುಂಬಿಕ 2ನೇ ವರ್ಷದ ಹಾಕಿ ಪಂದ್ಯಾವಳಿ ‘ಹೈಫ್ಲೈಯರ್ಸ್ ಕಪ್-2023’ ನ. 28ರಿಂದ ಆರಂಭಗೊಳ್ಳಲಿದೆ.
ವಿ.ಬಾಡಗದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ 5 ದಿನಗಳ ಕಾಲ ಹಾಕಿ ಪಂದ್ಯಾವಳಿ ನಡೆಯಲಿದೆ. ಇದಕ್ಕಾಗಿ ಭರದ ಸಿದ್ಧತೆಗಳು ನಡೆಯುತ್ತಿದ್ದು, ಮುಕ್ತಾಯ ಹಂತದಲ್ಲಿದೆ.
ವಿರಾಜಪೇಟೆ ತಾಲೂಕಿನ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್‌ನಾಡು ವ್ಯಾಪ್ತಿಯಲ್ಲಿ ಐನ್‌ಮನೆ ಹೊಂದಿರುವ ಕೊಡವ ಕುಟುಂಬ ತಂಡಗಳಿಗಾಗಿ ಆಯೋಜಿಸಲಾಗಿರುವ ಈ ಹಾಕಿ ಪಂದ್ಯಾವಳಿ ವಿ.ಬಾಡಗ ಗ್ರಾಮದಲ್ಲಿ 2ನೇ ಬಾರಿಗೆ ನಡೆಯುತ್ತಿದೆ. ಹಾಕಿ ಕೂರ್ಗ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿರುವ ಈ ಕೌಟುಂಬಿಕ ಹಾಕಿ ಪಂದ್ಯಾವಳಿ ಹಾಕಿ ಕರ್ನಾಟಕ ಸಂಸ್ಥೆಯ ನಿಯಮಾವಳಿಗೆ ಬದ್ಧವಾಗಿ ನಾಕ್‌ಔಟ್ ಮಾದರಿಯಲ್ಲಿ ನಡೆಯಲಿದೆ. ಈಗಾಗಲೇ 19 ಕೊಡವ ಕುಟುಂಬ ಹಾಕಿ ತಂಡಗಳು ಹೆಸರು ನೋಂದಾಯಿಸಿಕೊಂಡಿವೆ.
ಪಂದ್ಯಾವಳಿಯು ಸಂಪೂರ್ಣವಾಗಿ ದಾನಿಗಳ ನೆರವಿನಿಂದಲೇ ಆಯೋಜನೆಗೊಂಡಿದೆ. ಗ್ರಾಮದ ಸರ್ಕಾರಿ ಶಾಲೆಯ ಮೈದಾನವನ್ನು ಲಕ್ಷಾಂತರ ರೂ.ಹಣ ವಿನಿಯೋಗಿಸಿ ಈ ಬಾರಿಯೂ ಅಭಿವೃದ್ಧಿಪಡಿಸಲಾಗಿದೆ. ವಿ.ಬಾಡಗ ಹೈಫ್ಲೈಯರ್ಸ್ ಸಂಸ್ಥೆ ಅಧ್ಯಕ್ಷರಾದ ಅಮ್ಮಣಿಚಂಡ ರಂಜು ಪೂಣಚ್ಚ ನೇತೃತ್ವದಲ್ಲಿ ಒಂದು ವಾರದಿಂದ ಮೈದಾನದ ಸಿದ್ಧತೆ ಕೆಲಸ ನಡೆಯುತ್ತಿದೆ ಎಂದು ಕ್ರೀಡಾ ಸಮಿತಿ ಅಧ್ಯಕ್ಷ ಕುಪ್ಪಂಡ ದಿಲನ್ ಬೋಪಣ್ಣ ತಿಳಿಸಿದ್ದಾರೆ.
ಮೈದಾನದಲ್ಲಿ ಹಾಕಿ ಅಂಕಣದ ಗುರುತು ಹಾಕುವ ಕೆಲಸ ಮಾತ್ರ ಬಾಕಿ ಉಳಿದಿದೆ. ನ.26 ರ ಸಂಜೆಯೊಳಗಾಗಿ ಈ ಕಾರ್ಯವೂ ಪೂರ್ಣಗೊಳ್ಳಲಿದೆ. ಪಂದ್ಯಾವಳಿಯ ಟೈಸ್ ಅನ್ನು ಅಂತಿಮಗೊಳಿಸಲಾಗಿದ್ದು, ತಾಂತ್ರಿಕ ಸಮಿತಿ ಕೂಡ ಸಿದ್ಧಗೊಂಡಿದೆ. ಈ ಬಾರಿಯ ಪಂದ್ಯಾವಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.