ಜಿಲ್ಲೆ

ಬರಪೀಡಿತ ಜಿಲ್ಲೆಯಲ್ಲಿ ಐದು ವರ್ಷಗಳಲ್ಲೇ ಹೆಚ್ಚು ಬಿತ್ತನೆ ; ಮುಂಗಾರಿನಿಂದಲೂ ಉತ್ತಮ ಮಳೆ

Kolar

ಕೋಲಾರ: ಬರಪೀಡಿತ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಪ್ರಮಾಣ ಶೇ.90.4ರಷ್ಟಾಗಿದ್ದು, ರೈತರು ಭರಪೂರ ಬೆಳೆಯ ನಿರೀಕ್ಷೆಯಲ್ಲಿದ್ದಾರೆ.

ಮುಂಗಾರು ಆರಂಭ ಉತ್ತಮಗೊಂಡರೂ ಬಹುತೇಕ ವರ್ಷಗಳಲ್ಲಿ ಜುಲೈ, ಆಗಸ್ಟ್‌ನಲ್ಲಿ ಮಳೆ ಕೊರತೆಯಿಂದ ಬೆಳೆ ನಷ್ಟವಾಗುತ್ತಿತ್ತು. ಈ ವರ್ಷ ಸಕಾಲದಲ್ಲಿ ಬಿದ್ದ ಮಳೆಯಿಂದ 1.02 ಲಕ್ಷ ಹೆಕ್ಟೇರ್ ಗುರಿಗೆ 92,157 ಹೆಕ್ಟೇರ್‌ನಲ್ಲಿ ಬಿತ್ತನೆಯಾಗುವ ಮೂಲಕ ಶೇ. 90.4 ಸಾಧನೆಯಾಗಿ ಕಳೆದ ವರ್ಷಕ್ಕಿಂತ ಶೇ.14 ಹೆಚ್ಚು ಬಿತ್ತನೆಯಾಗಿದೆ.

ಕಾರಣ ಹಲವು: ಜಿಲ್ಲೆಯ ಪ್ರಮುಖ ಆಹಾರ ಬೆಳೆಯಾದ ರಾಗಿ. 67,590 ಹೆಕ್ಟೇರ್ ಗುರಿಗೆ 68,505 ಹೆಕ್ಟೇರ್ ಬಿತ್ತನೆಯಾಗುವ ಮೂಲಕ ಶೇ.100ರ ಗುರಿ ಮೀರಿದೆ. ಉದ್ಯೋಗದ ನಿಮಿತ್ತ ನಗರ ಸೇರಿದ್ದವರು ಕರೊನಾದಿಂದ ಸ್ವಗ್ರಾಮಗಳಿಗೆ ಬಂದು ಪಾಳು ಬಿಟ್ಟಿದ್ದ ಭೂಮಿ ಉಳುವೆ ಮಾಡಿ ಬಿತ್ತನೆ ಮಾಡಿದ್ದರಿಂದ ಕಳೆದ ಐದು ವರ್ಷಗಳ ಅವಧಿಯಲ್ಲಿ ಈ ಸಲ ಹೆಚ್ಚು ಬಿತ್ತನೆ ಆಗಿದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ಉತ್ತಮ ಮಳೆ: ಜಿಲ್ಲೆಯ ವಾಡಿಕೆ ಮಳೆ ಪ್ರಮಾಣ ಸರಾಸರಿ 745.95 ಮಿಮೀ. ಅಕ್ಟೋಬರ್‌ವರೆಗೆ 643.7 ಮಿಮೀ ಮಳೆಯಾಗಬೇಕಿತ್ತು. ಆದರೆ ಈಗಾಗಲೆ 794.4 ಮಿಮೀ ಮಳೆಯಾಗಿದೆ. ಈ ಪೈಕಿ ಬಂಗಾರಪೇಟೆಯಲ್ಲಿ 616 ಮಿಮೀಗೆ 763 (ಶೇ 24) ಕೋಲಾರ-634 ಮಿಮೀಗೆ 743 (ಶೇ.17), ಮಾಲೂರು-659 ಮಿಮೀಗೆ782 (ಶೇ.19) ಮುಳಬಾಗಿಲು-617 ಮಿಮೀಗೆ 804 ಮಿಮೀ (ಶೇ.30) ಶ್ರೀನಿವಾಸಪುರ- 618 ಮಿಮೀಗೆ 784 ಮಿಮೀ (ಶೇ.27) ಹಾಗೂ ಕೆಜಿಎಫ್- 719 ಮಿಮೀಗೆ 891 ಮಿಮೀ (ಶೇ.24) ಮಳೆಯಾಗಿದೆ.

ಪ್ರಸಕ್ತ ಮುಂಗಾರಿನಲ್ಲಿ ಶೇ.90.4 ಬಿತ್ತನೆಯಾಗಿದ್ದು, ಉತ್ತಮ ಮಳೆಯಾಗಿದೆ. ಕರೊನಾ ಸಂದರ್ಭದಲ್ಲಿ ರೈತರು ಕೃಷಿಗೆ ಒತ್ತು ನೀಡಿದ್ದಾರೆ. ರಾಗಿ ತೆನೆ ಕಟ್ಟಿ ಕಾಳು ಬಲಿಯುವ ಹಂತದಲ್ಲಿದ್ದು, ನೆಲಕ್ಕೆ ಬಾಗಿರುವ ಪೈರನ್ನು ನಾಲ್ಕೈದು ಒಟ್ಟಿಗೆ ಸೇರಿಸಿ ಗಂಟು ಹಾಕುವುದರಿಂದ ಹಾನಿ ತಡೆಯಬಹುದು. ರೂಪಾದೇವಿ, ಜಂಟಿ ಕೃಷಿ ನಿರ್ದೇಶಕಿ, ಕೋಲಾರ ಉತ್ತಮ ಮಳೆಯಿಂದಾಗಿ ರಾಗಿ, ಸಜ್ಜೆ ಸೇರಿ ಎಲ್ಲ ಬೆಳೆಗಳು ಉತ್ತಮವಾಗಿವೆ. ಕಟಾವು ಸಮಯದಲ್ಲಿ ಮಳೆ ಬಾರದಿದ್ದರೆ ಈ ವರ್ಷ ಚೆನ್ನಾಗಿ ಫಸಲು ನಿರೀಕ್ಷಿಸಬಹುದು. ಮುನಿಶಾಮಪ್ಪ, ರೈತ