ಜಿಲ್ಲೆ

ನಗರದ ಅಭಿವೃದ್ಧಿಗೆ ಶಾಸಕರಿಂದ ಅತ್ಯಧಿಕ ಅನುದಾನ

ಆದರ್ಶ್. ಎಂ.ಕೆ.

ಮಡಿಕೇರಿ: ಮಡಿಕೇರಿ ನಗರದ ಸಮಗ್ರ ಅಭಿವೃದ್ಧಿಗಾಗಿ ಪಣ ತೊಟ್ಟಿರುವ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಅತ್ಯಧಿಕ ಅನುದಾನವನ್ನು ನೀಡುವ ಮೂಲಕ ಜನಪರ ಕಾಳಜಿಯನ್ನು ಪ್ರದರ್ಶಿಸಿದ್ದಾರೆ ಎಂದು ನಗರ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ನಗರಸಭಾ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಶಾಸಕರ ವಿಶೇಷ ಅನುದಾನದಲ್ಲಿ ಇತ್ತೀಚೆಗೆ ಸುಮಾರು ೩ ಕೋಟಿ ರೂ.ಗಳನ್ನು ಮೀಸಲಿಟ್ಟ ಶಾಸಕರು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದು, ಇದು ಅಭಿನಂದನಾರ್ಹ ಕಾರ್ಯವಾಗಿದೆ. ಈ ಹಿಂದೆ ಇದ್ದ ಶಾಸಕರ ಅವಧಿಯಲ್ಲಿ ಶಾಸಕರ ಅನುದಾದಿಂದ ಇಷ್ಟು ದೊಡ್ಡ ಮೊತ್ತದ ಹಣ ನಗರದ ಅಭಿವೃದ್ಧಿಗೆ ದೊರೆತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ.

ಶಾಸಕ ಡಾ.ಮಂತರ್ ಗೌಡ ಅವರು ನಗರದ ಜನತೆಗೆ ನೀಡಿದ ಭರವಸೆಯಂತೆ ನಡೆದುಕೊಳ್ಳುತ್ತಿದ್ದಾರೆ. ನಗರದ ಬಹುತೇಕ ಎಲ್ಲಾ ರಸ್ತೆಗಳನ್ನು ಸರ್ವಋತು ರಸ್ತೆಗಳನ್ನಾಗಿ ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಿದ್ದಾರೆ. ಏಪ್ರಿಲ್ ತಿಂಗಳೊಳಗೆ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಭರವಸೆಯನ್ನು ಕೂಡ ನೀಡಿದ್ದಾರೆ. ಈಗಾಗಲೇ ವಿವಿಧ ಬಡಾವಣೆಗಳಲ್ಲಿ ಕಾಮಗಾರಿ ಆರಂಭಗೊಂಡಿದ್ದು, ಗುಂಡಿ ಬಿದ್ದ ರಸ್ತೆಗಳಿಂದ ನಗರ ಮುಕ್ತವಾಗಲಿದೆ. ಜತೆಗೆ ಪ್ರವಾಸೋದ್ಯಮ ಕ್ಷೇತ್ರದಲ್ಲೂ ಪ್ರಗತಿಯಾಗಲಿದೆ ಎಂದು ಪ್ರಕಾಶ್ ಆಚಾರ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.