ಜಿಲ್ಲೆ

ಗುರುಮುಖ ಶಿಕ್ಷಣದಿಂದ ಮಾತ್ರ ಅತ್ಯುನ್ನತ ಸಾಧನೆ

ಬಸವರಾಜ ವೀರಪ್ಪ ಗರಗ

ಗೋಕರ್ಣ: ಗುರುವಿನ ಅಶೀರ್ವಾದದ ಗುರುಮುಖ ಶಿಕ್ಷಣದಿಂದ ಮಾತ್ರ ಅತ್ಯುನ್ನತ ಸಾಧನೆಯನ್ನು ವಿದ್ಯಾರ್ಥಿಗಳು ತಮ್ಮದಾಗಿಸಿಕೊಳ್ಳಲು ಸಾಧ್ಯ. ಇದಕ್ಕೆ ಮಹಾಭಾರತದಲ್ಲಿನ ಏಕಲವ್ಯ ಸಾರ್ವಕಾಲಿಕ ಉದಾಹರಣೆಯಾಗಿದ್ದಾನೆ ಎಂದು ಇಲ್ಲಿನ ಶ್ರೀ ಹರಿಹರೇಶ್ವರ ವೇದಪಾಠ ಶಾಲೆಯ ಪ್ರಾಚಾರ್ಯ ವಿದ್ವಾನ್ ಉದಯ ಮಯ್ಯರ ನುಡಿದರು.

ಶ್ರೀ ಭದ್ರಕಾಳಿ ಸಮೂಹ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಏಕಲವ್ಯ ಗುರುವಿನಿಂದ ಪ್ರತ್ಯಕ್ಷವಾಗಿ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ರಾಜಗುರು ದ್ರೋಣಾಚಾರ್ಯರ ಮೂರ್ತಿಯನ್ನು ಪ್ರತಿಷ್ಠಾಪಿಸಿಕೊಂಡು ಅಭ್ಯಸಿಸಿದ. ಗುರುವಿನ ಆಶೀರ್ವಾದದ ಪರೋಕ್ಷ ಶಿಕ್ಷಣಕ್ಕೆ ಕೂಡ ಎಂತಹ ಶಕ್ತಿ ಮತ್ತು ಪ್ರೇರಣೆ ಇರುತ್ತದೆ ಎನ್ನುವುದನ್ನು ಲೋಕಕ್ಕೆ ತೋರಿದ ಮೊದಲ ವಿದ್ಯಾರ್ಥಿ ಏಕಲವ್ಯನಾಗಿದ್ದಾನೆ. ಈತನ ಸಾಧನೆ ಜಗತ್ತಿನ ಎಲ್ಲ ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು ಎಂದರು.

ರಾಜ್ಯ ಮಟ್ಟದ ಶಿಕ್ಷಣರತ್ನ ಪ್ರಶಸ್ತಿ ಪುರಸ್ಕೃತ ಪ್ರಾಧ್ಯಾಪಕ ಡಾ.ಅರವಿಂದ ನಾಯಕ, ಶ್ರೀ ಚಾಮಿ ಟ್ರಸ್ಟ್ ಅಧ್ಯಕ್ಷೆ ಜ್ಯೋತಿ ಮಿರ್ಜಾನಕರ, ಆಡಳಿತ ಮಂಡಳಿ ಅಧ್ಯಕ್ಷ ಡಾ.ವಿ.ಆರ್. ಮಲ್ಲನ್, ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಕಾರ್ಯದರ್ಶಿ ಜಿ.ಎನ್. ನಾಯಕ, ಖಜಾಂಚಿ ರವೀಂದ್ರ ಕೊಡ್ಲೆಕೆರೆ ಮಾತನಾಡಿದರು.

ವಿದ್ವಾನ್ ಉದಯ ಮಯ್ಯರ್, ಅಂತರ್ ರಾಜ್ಯ ಮಾಜಿ ಕ್ರೀಡಾಪಟು ಚಂದ್ರಹಾಸ ಬಿ. ನಾಯಕ ಹೆಗ್ರೆ, ಉದ್ಯಮಿ ವಾಸುದೇವ ಶ್ರೀಧರ ಕಾಮತ ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಪವನ ಗೌಡ, ಶ್ರೀಕಾಂತ ಗೌಡ, ಕವಿತಾ ಗೌಡ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ ನಾಯಕ ಅವರನ್ನು ಸನ್ಮಾನಿಸಲಾಯಿತು. ಆಡಳಿತ ಮಂಡಳಿಯ ಡಾ. ರಾಮಚಂದ್ರ ಮಲ್ಲನ್, ಕಾಲೇಜ್ ಪ್ರಾಚಾರ್ಯ ಎಸ್.ಸಿ. ನಾಯಕ, ಪ್ರಾಧ್ಯಾಪಕ ರಾಮಮೂರ್ತಿ ನಾಯಕ, ಇಂಗ್ಲಿಷ್ ಮಾಧ್ಯಮದ ಅಧ್ಯಾಪಕಿ ರೇವತಿ ಆರ್. ಮಲ್ಲನ್, ಪ್ರಾಥಮಿಕ ವಿಭಾಗದ ಮುಖ್ಯಾಧ್ಯಾಪಕ ಎಂ.ಆರ್. ನಾಯ್ಕ, ಶಿಕ್ಷಣ ಸಂಯೋಜಕಿ ದೀಪಾ ಕಾಮತ್, ಸಿಆರ್​ಪಿ ಮೋಹಿನಿ ಗೌಡ, ಇತರರಿದ್ದರು.

ಮುಖ್ಯಾಧ್ಯಾಪಕ ಸಿ.ಜಿ. ನಾಯಕ್​ದೊರೆ, ಆರ್.ಜಿ. ನಾವಡ ಹಾಗೂ ವಿವೇಕ ಪಟಗಾರ ಕಾರ್ಯಕ್ರಮ ನಿರ್ವಹಿಸಿದರು.