ಎನ್.ಆರ್.ಪುರ: ಯಾಂತ್ರೀಕರಣದ ಮೂಲಕ ಭತ್ತದ ಕೃಷಿ ಮಾಡಿದರೆ ಲಾಭವೂ ಜಾಸ್ತಿ ಹಾಗೂ ಖರ್ಚು ಕಡಿಮೆಯಾಗಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಹೇಶ್ ಹೇಳಿದರು.
ತಾಲೂಕಿನ ಗುಬ್ಬಿಗಾ ಗ್ರಾಮದ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಎಚ್.ಕೈಮರ ವಲಯ ಹಾಗೂ ಕೃಷಿ ಇಲಾಖೆ ಆಶ್ರಯದಲ್ಲಿ ಯಾಂತ್ರೀಕರಣದ ಮೂಲಕ ಭತ್ತದ ಬೇಸಾಯ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈತರು ಭತ್ತದ ಕೃಷಿ ಬಿಟ್ಟು ಅಡಕೆ ಹಾಗೂ ಇತರ ವಾಣಿಜ್ಯ ಬೆಳೆಬೆಳೆಯುವ ಕಡೆ ಗಮನ ನೀಡುತ್ತಿದ್ದಾರೆ. ಆಹಾರ ಬೆಳೆಯಾದ ಭತ್ತದ ಕೃಷಿಯನ್ನು ರೈತರು ಬಿಡಬಾರದು ಎಂದು ಸಲಹೆ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿ ಯಂತ್ರ ಶ್ರೀಯೋಜನಾಧಿಕಾರಿ ಬಾಲಕೃಷ್ಣ ಮಾಹಿತಿ ನೀಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅನೇಕ ವರ್ಷಗಳಿಂದ ಭತ್ತದ ಬೇಸಾಯವನ್ನು ಯಾಂತ್ರೀಕರಣದ ಮೂಲಕ ಮಾಡಲು ತರಬೇತಿ, ಪ್ರಾತ್ಯಕ್ಷಿಕೆಯೊಂದಿಗೆ ನಡೆಸುತ್ತಾ ಬಂದಿದೆ. ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕಿನಲ್ಲಿ ಪ್ರತಿ ವರ್ಷ 500 ಎಕರೆ ಪ್ರದೇಶದಲ್ಲಿ ಯಂತ್ರ ಶ್ರೀಭತ್ತದ ಬೇಸಾಯ ಮಾಡುತ್ತಿದ್ದಾರೆ.ಇದರಿಂದ ಅತಿ ಕಡಿಮೆ ಖರ್ಚಿನಲ್ಲಿ ಜಾಸ್ತಿ ಭತ್ತ ಬೆಳೆಯಲು ಸಾಧ್ಯವಾಗುತ್ತಿದೆ ಎಂದರು.
ಸಭೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಯ ಕೃಷಿ ವಿಭಾಗದ ಯೋಜನಾಧಿಕಾರಿ ಮಾರುತಿ, ಒಕ್ಕೂಟದ ಅಧ್ಯಕ್ಷ ಲಕ್ಷ್ಮಣ, ಸಂಜೀವ, ಕೃಷಿ ಅಧಿಕಾರಿ ಹನುಮಂತ, ಪ್ರಬಂಧಕ ದೀಕ್ಷಿತ್, ಕೈಮರ ವಲಯ ಮೇಲ್ವೀಚಾರಕ ತೀರ್ಥರಾಜ್, ಸೇವಾ ಪ್ರತಿನಿಧಿಗಳಾದ ಅನ್ನಪೂರ್ಣ, ಶಿಬಿ, ಕೃಷಿಕರಾದ ಪ್ರತೀಕ್, ರಾಘವ ಪೂಜಾರಿ ಹಾಗೂ ಯಂತ್ರ ಶ್ರೀ ನಾಟಿ ಮಾಡುವ ರೈತರು ತರಬೇತಿಯಲ್ಲಿ ಭಾಗವಹಿಸಿದ್ದರು.