ಜಿಲ್ಲೆ

ಮಿಶ್ರ ಬೇಸಾಯದಿಂದ ಅಧಿಕ ಆದಾಯ

ಕೋಲಾರ ಡೆಸ್ಕ್
ಕೃಷಿಯಲ್ಲಿ ಯಶಸ್ಸು ಕಾಣುತ್ತಿರುವ ಪಾತರಾಮಗೊಳ್ಳದ ರೈತ ವೆಂಕಟೇಶ್

ಬೂದಿಕೋಟೆ: ಬಾಲ್ಯದಲ್ಲೇ ಬೇಸಾಯದ ಗೀಳು ಹಚ್ಚಿಕೊಂಡು ಕೃಷಿ ಜತೆಗೆ ಉಪಕೃಷಿ ಅನುಸರಿಸುವ ಮೂಲಕ ಆರ್ಥಿಕ ಲಾಭದೊಂದಿಗೆ ಮಾದರಿ ಕೃಷಿ ಮಾಡುತ್ತಿರುವ ಪಾತರಾಮಗೊಳ್ಳ ಗ್ರಾಮದ ವೆಂಕಟೇಶ್​ ಯಶಸ್ವಿ ರೈತ ಎನಿಸಿದ್ದಾರೆ.
ಕೋಲಾರ ಜಿಲ್ಲೆ ಟೊಮ್ಯಾಟೊ ಜತೆಗೆ ಹೈನುಗಾರಿಕೆಗೆ ಪ್ರಸಿದ್ಧಿ ಪಡೆದಿದೆ. ಒಮ್ಮೆ ಟೊಮ್ಯಾಟೊ, ಇತರ ತರಕಾರಿಗಳಿಗೆ ಬೆಲೆ ಬಂದರೆ, ನಾಲ್ಕು ಕಾಸು ಸಂಪಾದಿಸಬಹುದು ಎಂಬ ಆಸೆಯಿಂದ ರೈತರೆಲ್ಲ ಅದೇ ಬೆಳೆ ಬೆಳೆದು ಕೈಸುಟ್ಟುಕೊಳ್ಳುವುದು ಮಾಮೂಲಿಯಾಗಿದೆ. ಇದಕ್ಕೆ ತದ್ವಿರುದ್ದವಾಗಿ ಬಂಗಾರಪೇಟೆ ತಾಲೂಕು ಬೂದಿಕೋಟೆ ಹೋಬಳಿ ವ್ಯಾಪ್ತಿಯ ಪಾತರಾಮಗೊಳ್ಳದ ರೈತ ವೆಂಕಟೇಶ್​ ಮಿಶ್ರಬೆಳೆ ಪದ್ಧತಿ ಅಳವಡಿಸಿಕೊಂಡಿದ್ದು, ಒಂದು ಬೆಳೆಯಲ್ಲಿ ನಷ್ಟವಾದರೂ ಮತ್ತೊಂದು ಬೆಳೆಯಲ್ಲಿ ಲಾಭ ಗಳಿಸುತ್ತಿದ್ದಾರೆ.
5 ಎಕರೆ ಜಮೀನಿನಲ್ಲಿ ಎರಡು ಬೋರ್​ವೆಲ್​ ಕೊರೆಸಿದ್ದಾರೆ. ಹತ್ತಾರು ಬೆಳೆ ಬೆಳೆಯುವ ವಿಧಾನ ಅನುಸರಿಸುತ್ತಿರುವ ವೆಂಕಟೇಶ್​ ಈ ಹಿಂದೆ ಟೊಮ್ಯಾಟೊ ಬೆಳೆಗೆ ಉತ್ತಮ ಲಾಭ ಪಡೆದಿದ್ದರು. ಸದ್ಯ ಟೊಮ್ಯಾಟೊ, ಹಸಿಮೆಣಸಿನಕಾಯಿ, ಬಜ್ಜಿ ಮೆಣಸಿನಕಾಯಿ, ಸೇವಂತಿ, ಜೋಳ, ಹಿಪು$್ಪನೇರಳೆ ಸೊಪು$್ಪ ಸೇರಿ ಹಲವು ಬೆಳೆಗಳನ್ನು ಬೆಳೆದಿದ್ದಾರೆ. ಒಂದು ಬೆಳೆಯಲ್ಲಿ ಬೆಲೆ ಇಲ್ಲದೆ ನಷ್ಟವಾದರೆ ಮತ್ತೊಂದು ಬೆಳೆಯಿಂದ ಆದಾಯ ಪಡೆಯುವ ಜಾಣ್ಮೆ ಹೊಂದಿದ್ದಾರೆ. ವೆಂಕಟೇಶ ಅವರ ಮಗ ಡಿಗ್ರಿ ಮುಗಿಸಿ ಕೆಲಸ ಹುಡುಕದೆ ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿದ್ದಾರೆ. ಮತ್ತೊಬ್ಬ ಮಗ ಐಟಿಐ ಓದುತ್ತಿದ್ದು, ವಿದ್ಯಾಭ್ಯಾಸದ ಜತೆಗೆ ಕೃಷಿ ಕೆಲಸದಲ್ಲಿ ನೆರವಾಗಿದ್ದಾರೆ.


ಹೈನುಗಾರಿಕೆಯಿಂದ ಹೆಚ್ಚು ಲಾಭ


ಕೃಷಿಯ ಜತೆಗೆ 20 ಕುರಿ ಮತ್ತು 5 ಸೀಮೆ ಹಸುಗಳನ್ನು ಸಾಕುತ್ತಿದ್ದು, ದಿನಕ್ಕೆ 50 ಲೀ.ಗೂ ಹೆಚ್ಚಿನ ಹಾಲು ಉತ್ಪಾದಿಸಿ, ತಿಂಗಳಿಗೆ 60 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ. 4 ತಿಂಗಳ ಕಾಲ ಕುರಿ ಸಾಕಾಣಿಕೆ ಮಾಡಿ ಖರೀದಿಸಿದ್ದಕ್ಕಿಂತ ಮೂರುಪಟ್ಟು ಲಾಭಕ್ಕೆ ಕುರಿಗಳನ್ನು ಮಾರಾಟ ಮಾಡಿ ಆದಾಯ ಮಾಡುತ್ತಿದ್ದಾರೆ. ಜತೆಗೆ ಕುರಿ ಗೊಬ್ಬರ ಮಾರಾಟ ಮಾಡಿ ಸಾವಿರಾರು ರೂ. ಸಂಪಾದನೆ ಮಾಡುತ್ತಿದ್ದಾರೆ. ಹಸು ಶೆಡ್​ನಿಂದ ಹೊರ ಬರುವ ಗಂಜಲ ಇತ್ಯಾದಿಗಳನ್ನು ಕೃಷಿಹೊಂಡಕ್ಕೆ ಹರಿದು ಹೋಗುವಂತೆ ಮಾಡಿದ್ದು, ಅದೇ ನೀರನ್ನು ಹುಲ್ಲು, ಇತರ ಬೆಳೆಗಳಿಗೆ ಹರಿಸುವುದರಿಂದ ಗೊಬ್ಬರವಿಲ್ಲದೆ ಬೆಳೆ ಚೆನ್ನಾಗಿ ಬರುತ್ತಿದೆ.

ಜೇನು ಸಾಕಾಣಿಕೆ: ತೋಟಗಾರಿಕಾ ಬೆಳೆಗಳ ಜತೆಗೆ ಜೇನು ಸಾಕಾಣಿಕೆಯನ್ನೂ ಅಳವಡಿಸಿಕೊಂಡಿದ್ದು, ಜೇನು ನೊಣಗಳಿಂದ ತೋಟದಲ್ಲಿ ಪರಾಗಸ್ಪರ್ಶ ಹೆಚ್ಚಾಗಿ ಇಳುವರಿಯೂ ಹೆಚ್ಚಾಗುತ್ತಿದೆ. ಸಾವಯವ ಕೃಷಿಗಾಗಿ ಎರೆಹುಳ ತೊಟ್ಟಿ ನಿರ್ಮಿಸಿದ್ದು, ಕೃಷಿ ಇಲಾಖೆ ನೆರವಿನೊಂದಿಗೆ ಎರೆಹುಳು ತರಿಸಿಕೊಂಡು ತೊಟ್ಟಿ, ತಿಪ್ಪೆಯಲ್ಲಿ ಎರೆಹುಳಗಳನ್ನು ಬಿಡಲಾಗಿದೆ. ಇದರಿಂದ ಗುಣಮಟ್ಟದ ಸಾಯವಯ ಗೊಬ್ಬರ ತಯಾರಾಗುತ್ತಿದ್ದು, ಜತೆಗೆ ಕುರಿ ಗೊಬ್ಬರ ಬಳಸಿ ಭೂಮಿಗೆ ನೀಡುತ್ತಿರುವುದು ಬೆಳೆಗಳು ಉತ್ತಮ ಫಸಲು ನೀಡಲು ಸಹಕಾರಿಯಾಗಿದೆ.

ಉದಯೋನ್ಮುಖ ರೈತ ಪ್ರಶಸ್ತಿ
ಹೈನುಗಾರಿಕೆಯಿಂದ ಇನ್ನಷ್ಟ್ಟು ಆದಾಯ ಗಳಿಸಲು ಉದ್ದೇಶಿಸಿರುವ ವೆಂಕಟೇಶ್​ ಇನ್ನೂ ಹತ್ತಾರು ಹಸುಗಳನ್ನು ಖರೀದಿಸುವ ಗುರಿ ಹೊಂದಿದ್ದಾರೆ. ಕೃಷಿ ಹಾಗೂ ಹೈನುಗಾರಿಕೆ ಜತೆಗೆ ಗ್ರಾಮದ ಡೇರಿಯಲ್ಲಿ ಕಾರ್ಯದರ್ಶಿಯಾಗಿದ್ದಾರೆ. ಇವರ ಕಾರ್ಯವೈಖರಿ ಕೃಷಿ ಇಲಾಖೆ ಉದಯೋನ್ಮುಖ ರೈತ ಪ್ರಶಸ್ತಿ ನೀಡಿ ಗೌರವಿಸಿದೆ.

ರೈತರು ಯಾವುದಾದರೊಂದು ಬೆಳೆಗೆ ಉತ್ತಮ ಬೆಲೆ ಇದ್ದರೆ ಉತ್ತಮ ಆದಾಯ ಗಳಿಸಬಹುದು ಎಂದು ಅದೇ ಬೆಳೆ ಬೆಳೆದು ಕೈ ಸುಟ್ಟುಕೊಳ್ಳುತ್ತಾರೆ. ಆದರೆ ನಾನು ಕೃಷಿ ಅಧಿಕಾರಿಗಳ ಮಾರ್ಗದರ್ಶನ ಪಡೆದು ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡು ಆದಾಯ ಮಾಡಿಕೊಳ್ಳುತ್ತಿದ್ದೇನೆ. ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಕಡಿಮೆ ಮಾಡಿ, ಎರೆಹುಳು ಮತ್ತು ಕೊಟ್ಟಿಗೆ ಗೊಬ್ಬರ ನೀಡುವುದರಿಂದ ಭೂಮಿಯ ಫಲವತ್ತತೆ ಹೆಚ್ಚಾಗಿ ಉತ್ತಮ ಫಸಲು ಬರುತ್ತಿದೆ. | ವೆಂಕಟೇಶ್​
ರೈತ
, ಪಾತರಾಮಗೊಳ್ಳ

ವೆಂಕಟೇಶ್​ ಇತರ ರೈತರಿಗಿಂತ ವಿಭಿನ್ನವಾಗಿ ಯೋಚಿಸುತ್ತ, ಕೃಷಿ ಇಲಾಖೆ ಸಲಹೆಗಳನ್ನು ಸ್ವೀಕರಿಸಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಜತೆಗೆ ಇತರ ರೈತರಿಗೆ ಮಾದರಿಯಾಗಿರುವ ತಾಲೂಕಿನ ಪ್ರಗತಿಪರ ರೈತರಲ್ಲಿ ವೆಂಕಟೇಶ್​ ಸಹ ಒಬ್ಬರಾಗಿದ್ದು, ಇವರಿಗೆ ಕೃಷಿ ಇಲಾಖೆಯಿಂದ ಉದಯೋನ್ಮುಖ ರೈತ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. | ವಿಜಯಕುಮಾರ್​ ಕೃಷಿ ಅಧಿಕಾರಿ ಬೂದಿಕೋಟೆ