ಜಿಲ್ಲೆ

ಸಮಗ್ರ ಕೃಷಿಯಿಂದ ಅಧಿಕ ಆದಾಯ

ಪ್ರಸಿನ್ ಕೆ.ಆರ್

ಆರ್.ಶ್ರೀನಿವಾಸ್ ಉಳ್ಳಾವಳ್ಳಿ ಹಿರೀಸಾವೆ

ಸಾವಯವ ಹಾಗೂ ಸಮಗ್ರ ಕೃಷಿ ಅನುಸರಿಸಿ ಹೆಚ್ಚಿನ ಲಾಭ ಪಡೆಯುವ ಮೂಲಕ ಅಮ್ಮನಹಳ್ಳಿ ಗ್ರಾಮದ ಸಾವಯವ ಕೃಷಿಕ ಆರ್.ನಾಗರಾಜ್ ಮಾದರಿಯಾಗಿದ್ದಾರೆ.

ತಮಗಿರುವ ಏಳು ಎಕರೆ ಕೃಷಿ ಜಮೀನಿನಲ್ಲಿ ಸಾವಯವ ಹಾಗೂ ಸಮಗ್ರ ಕೃಷಿ ಅಳವಡಿಸಿಕೊಂಡಿದ್ದು, ಸದಾ ಕೃಷಿ ಚಟುವಟಿಕೆಯಲ್ಲಿ ತೊಡಗುವ ಕಾಯಕ ರೂಢಿಸಿಕೊಂಡಿದ್ದಾರೆ. ಅವರ ಕುಟುಂಬದ ಸದಸ್ಯರ ಸಹಕಾರವೇ ಇವರ ಯಶಸ್ಸಿಗೆ ಕಾರಣವಾಗಿದೆ.

ಜಮೀನಿನಲ್ಲಿ 400 ತೆಂಗು, 250 ಅಡಕೆ, 120 ನಿಂಬೆ, 80 ಸಪೋಟ ಗಿಡಗಳ ಜತೆಗೆ ಕಿತ್ತಳೆ, ಮೂಸಂಬಿ, ಅಂಜೂರ, ಮಾವು, ಹಲಸು, ನೇರಳೆ, ಬೆಟ್ಟದ ನಲ್ಲಿ, ಯಳ್ಳಿ, ಪಪ್ಪಾಯಿ, ಸೀಬೆ ಸೇರಿದಂತೆ ವಿವಿಧ ಹಣ್ಣಿನ ಗಿಡಗಳನ್ನು ಬೆಳೆಸಿದ್ದು ಎಲ್ಲ ಬೆಳೆ ಹಾಗೂ ಗಿಡ-ಮರಗಳಿಗೆ ಹನಿನೀರಾವರಿ ವ್ಯವಸ್ಥೆ ಮಾಡಲಾಗಿದೆ.

ಪಚ್ಚಬಾಳೆ, ಪುಟ್ಟಬಾಳೆ, ಏಲಕ್ಕಿ, ನೇಂದ್ರ ಹಾಗೂ ರಸಬಾಳೆ ಸೇರಿದಂತೆ ವಿವಿಧ ತಳಿಯ ಬಾಳೆ ಬೆಳೆಸಿದ್ದಾರೆ. ಜತೆಗೆ ಹೆಬ್ಬೇವು, ಸಿಲ್ವರ್, ತೇಗಾ, ನಾಟಿಬೇವು, ಕಾಡು ಗೋಡಂಬಿ ಹಾಗೂ ವಿವಿಧ ಗಿಡಗಳನ್ನು ಬೆಳೆಸುವ ಮೂಲಕ ಕಾಡು ಕೃಷಿಗೂ ಆದ್ಯತೆ ನೀಡಿರುವುದು ವಿಶೇಷ.

ತರಕಾರಿ ಬೆಳೆಗೂ ಆದ್ಯತೆ: ಅರ್ಧ ಎಕರೆ ಕೃಷಿ ಜಮೀನನ್ನು ಮನೆ ಬಳಕೆಗೆ ತರಕಾರಿ ಬೆಳೆಯಲೆಂದು ಮೀಸಲಿಟ್ಟಿದ್ದು ಟೈಲ್ಸ್ ಹಾಗೂ ಕಲ್ಲಿನ ಚಪ್ಪಡಿಗಳನ್ನು ಬಳಸಿಕೊಂಡು ತೊಟ್ಟಿಗಳನ್ನು ನಿರ್ಮಿಸಿ ಪೈಪ್ ವ್ಯವಸ್ಥೆಯೊಂದಿಗೆ ಅಗತ್ಯವಿರುವ ಮೆಣಸಿನಕಾಯಿ, ಬದನೆ, ಕ್ಯಾಪ್ಸಿಕಂ, ಗೋರಿಕಾಯಿ, ಬೆಂಡೆ, ಸಂಬಾರ, ತೊಗರಿ, ಶೇಂಗಾ, ದಂಟು, ಮೈಸೂರು ಕೀರೆ, ಕೊತ್ತಂಬರಿ, ಮೆಂತ್ಯ, ಪಾಲಾಕ್ ಸೊಪ್ಪು ಸೇರಿದಂತೆ ವಿವಿಧ ಬಗೆಯ ತರಕಾರಿ ಹಾಗೂ ಸೊಪ್ಪುಗಳನ್ನು ಬೆಳೆದು ಮನೆ ಬಳಕೆಗೆ ಉಪಯೋಗಿಸುತ್ತಿದ್ದಾರೆ. ಇದು ಕುಟುಂಬದವರ ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲವಾಗಿದೆ ಎಂದು ಆರ್.ನಾಗರಾಜ್ ಹೇಳುತ್ತಾರೆ.

ಕೊಟ್ಟಿಗೆ ಗೊಬ್ಬರ ಬಳಕೆ: ನಾಗರಾಜ್ 20ಕ್ಕೂ ಹೆಚ್ಚು ಮಿಶ್ರತಳಿ ಹಸುಗಳನ್ನು ಸಾಕಿದ್ದು, ಅವರೇ ಸ್ವತಃ ಚಿಲ್ಲಿಂಗ್ ಪಾಯಿಂಟ್ ಮಾಡಿಕೊಂಡಿದ್ದಾರೆ. ದಿನದಲ್ಲಿ 300 ಲೀಟರ್ ಹಾಲು ಉತ್ಪಾದಿಸುತ್ತಿದ್ದಾರೆ. ಅಲ್ಲದೆ ಬೇರೆ ರೈತರಿಂದ 700 ಲೀಟರ್ ಹಾಲು ಶೇಖರಣೆಯಾಗಲಿದೆ. ಅಲ್ಲದೆ ಕುರಿ, ಮೊಲ ಹಾಗೂ 150ಕ್ಕೂ ಹೆಚ್ಚು ನಾಟಿ ಕೋಳಿಗಳನ್ನು ಸಾಕಿದ್ದಾರೆ. ಇದರಿಂದ ದಿನದಲ್ಲಿ ಸಾಕಷ್ಟು ಕೊಟ್ಟಿಗೆ ಗೊಬ್ಬರ ಲಭ್ಯವಾಗಲಿದೆ.

ತೆಂಗು, ಬಾಳೆ, ಅಡಕೆ ಇತರ ಬೆಳೆಗಳಿಗೆ ವರ್ಷದಲ್ಲಿ ಎರಡು-ಮೂರು ಬಾರಿ ಕೊಟ್ಟಿಗೆ ಗೊಬ್ಬರ ನೀಡಲಾಗುತ್ತಿದೆ. ಸಮಯಕ್ಕೆ ಸರಿಯಾಗಿ ಉಳುಮೆಗೂ ಹೆಚ್ಚಿನ ಆದ್ಯತೆ ನೀಡಲಿದ್ದು ಮಣ್ಣು ಹದಗೊಂಡು ನೀರು ಹಾಯಿಸುವುದರಿಂದ ಗಿಡ-ಮರಗಳು ಉತ್ತಮ ಬೆಳವಣಿಗೆ ಹೊಂದಿ ನಿರೀಕ್ಷೆಯಂತೆ ಫಸಲು ಹಿಡಿಯಲಿವೆ. ಕಳೆದ 10 ವರ್ಷಗಳಿಂದ ಸಾವಯವ ಕೃಷಿ ಅನುಸರಿಸುತಿದ್ದು, ವರ್ಷದಲ್ಲಿ ಖರ್ಚು-ವೆಚ್ಚ ಕಳೆದು 10 ಲಕ್ಷ ರೂ. ಆದಾಯ ಸಿಗಲಿದೆ ಎಂದು ಆರ್.ನಾಗರಾಜ್ ತಿಳಿಸಿದರು.

ಗೋಬರ್ ಗ್ಯಾಸ್ ವ್ಯವಸ್ಥೆ: ನಾಗರಾಜ್ ಅವರ ಕೊಟ್ಟಿಗೆಯಲ್ಲಿ ಪ್ರತಿದಿನ ಹಸಿ ಸಗಣಿ ಸಿಗುವುದರಿಂದ ಗೋಬರ್ ವ್ಯವಸ್ಥೆ ಮಾಡಿಕೊಂಡಿದ್ದು, ಮನೆಗಷ್ಟೇ ಅಲ್ಲದೆ ಕಾರ್ಮಿಕರ ಮನೆಗಳಿಗೂ ಉಚಿತವಾಗಿ ಗೋಬರ್ ಗ್ಯಾಸ್ ಕಲ್ಪಿಸಿದ್ದಾರೆ.