ಹಗರಿಬೊಮ್ಮನಹಳ್ಳಿ: ತಾಲೂಕಿನ ಬನ್ನಿಗೋಳ, ಮುತ್ಕೂರು ಹಾಗೂ ಮಾಲವಿ ಗ್ರಾಮಗಳಲ್ಲಿ ತಲಾ 65ಲಕ್ಷ ರೂ. ವೆಚ್ಚದ ಆಯುಷ್ಮಾನ್ ಆರೋಗ್ಯ ಮಂದಿರ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಶಾಸಕ ಕೆ.ನೇಮಿರಾಜ ನಾಯ್ಕ ಸೋಮವಾರ ನೆರವೇರಿಸಿದರು.
ನಂತರ ಮಾಲವಿಯಲ್ಲಿ ಮಾತನಾಡಿ, 6ತಿಂಗಳ ಅವಧಿಯಲ್ಲಿ ಕಟ್ಟಡ ಕಾಮಗಾರಿ ಮುಗಿಸಬೇಕು ಹಾಗೂ ಗುಣಮಟ್ಟದಿಂದ ಕೂಡಿರಬೇಕು. ಈ ಕೇಂದ್ರಗಳ ನಿರ್ಮಾಣದಿಂದ ಗ್ರಾಮೀಣ ಪ್ರದೇಶದ ನಕಲಿ ವೈದ್ಯರ ಹಾವಳಿ ತಪ್ಪಿಸಲು ಸಾಧ್ಯವಾಗಲಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಪ್ರತಿ ಹಳ್ಳಿಗಳಲ್ಲಿ 50 ಲಕ್ಷ ರೂ.ವೆಚ್ಚದಲ್ಲಿ ಚರಂಡಿ ನಿರ್ಮಾಣ, ಸಿಸಿ ರಸ್ತೆ ಶಾಲೆ ಹಾಗೂ ಅಂಗನವಾಡಿ ಕಟ್ಟಡ, ಆಸ್ಪತ್ರೆಗಳಿಗೆ ಅಗತ್ಯ ಸಲಕರಣೆಗಳು ಸೇರಿದಂತೆ ಕ್ಷೇತ್ರದಲ್ಲಿನ ಸಾರ್ವಜನಿಕರಿಗೆ ಶಿಕ್ಷಣ, ಆರೋಗ್ಯ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮವಹಿಸಲಾಗುವುದು.
ಸುಮಾರು 20ವರ್ಷಕ್ಕಿಂತ ಹೆಚ್ಚು ಕಾಲದಿಂದ ಉಳುಮೆ ಮಾಡಿಕೊಂಡು ಬಂದ ರೈತರಿಗೆ, ನಮೂನೆ 57ಬಗರ್ ಹುಕುಂ ಕಾನೂನಿನ ಪ್ರಕಾರ ಪಟ್ಟಾ ನೀಡಲು ಸರ್ಕಾರ ಕ್ರಮಕೈಗೊಳ್ಳಬೇಕು. ಸರ್ಕಾರದ ಗ್ಯಾರೆಂಟಿ ಯೋಜನೆಗಿಂತ, ಶಿಕ್ಷಣ, ಆರೋಗ್ಯ ರೈತರಿಗೆ ನೀರಾವರಿ ಸೌಲಭ್ಯಗಳು, ಬಿತ್ತನೆ ಬೀಜ ಕೃಷಿ ಪರಿಕರಗಳನ್ನು ಉಚಿತವಾಗಿ ನೀಡಬೇಕು. ರೈತರ ಮಕ್ಕಳಿಗೆ ಉತ್ತಮ ಮತ್ತು ಉನ್ನತ ಶಿಕ್ಷಣ ನೀಡಲು ಸರ್ಕಾರ ಯೋಜನೆ ರೂಪಿಸಬೇಕು ಎಂದರು.
ಪ್ರಮುಖರಾದ ಮುತ್ಕೂರು ಮಂಜುರೆಡ್ಡಿ, ಬಣಕಾರ ಕೊಟ್ರೇಶ, ಅರುಣ್ ಕುಮಾರ್, ಮೈನಳ್ಳಿ ಕೊಟ್ರೇಶ, ಗ್ರಾಪಂ ಸದಸ್ಯರಾದ ಪೂಜಾರ ಚಂದ್ರಪ್ಪ, ಸಿದ್ದಾರೆಡ್ಡಿ, ಸಂಡೂರು ಮೆಹಬೂಬ್, ಪ್ರಮುಖರಾದ ಸೊಬಟಿ ಹರೀಶ್, ಬ್ಯಾಟಿ ನಾಗರಾಜ, ಬಸವರಾಜ, ತಾಲೂಕು ವೈದ್ಯಾಧಿಕಾರಿ ಪ್ರವೀಣ, ಶ್ರೀ ನಿವಾಸ್ ರೆಡ್ಡಿ, ನಾಗರಾಜ ಮತ್ತಿತರರು ಇದ್ದರು.