ಕಾರವಾರ: ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪಥದ ಸುರಂಗ ವಿಚಾರವಾಗಿ ಸಚಿವ ಮಂಕಾಳ ವೈದ್ಯ ಹಾಗೂ ಎಂಎಲ್ ಸಿ ಗಣಪತಿ ಉಳ್ವೇಕರ್ ನಡುವೆ ಹೇಳಿಕೆಗಳ ಸಮರ ಶುರುವಾಗಿದೆ.
ಕಾರವಾರ-ಬಿಣಗಾ ಟನಲ್ ಬಂದ್ ಮಾಡಿ ಹಲವು ದಿನ ತೆರೆಯದೇ ಇರುವ ಬಗ್ಗೆ ಈ ಹಿಂದೆ ಉಳ್ವೇಕರ್ ಆಕ್ಷೇಪಿಸಿದ್ದರು. ಪ್ರತಿಭಟಿಸಿದ್ದರು.
ಸಚಿವ ಮಂಕಾಳ ವೈದ್ಯ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬುಧವಾರ ಪಾಲ್ಗೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಉಳ್ವೇಕರ್ ವಿರುದ್ಧ ಹರಿಹಾಯ್ದರು.
ಹೆದ್ದಾರಿ ಕಾಮಗಾರಿ ಅಸಮರ್ಪಕವಾಗಿ ಆಗಿದೆ. ಇದರಿಂದ ಸಾವಿರಾರು ಜನರಿಗೆ ತೊಂದರೆಯಾಗಿದೆ. ಜಿಲ್ಲಾಡಳಿತದ ಬಳಿ ರಾಷ್ಟ್ರೀಯ ಹೆದ್ದಾರಿ 66 ವಿಸ್ತರಣೆ ವಿಚಾರವಾಗಿ ಯಾವುದೇ ದಾಖಲೆ ಇಲ್ಲ. ಎನ್‌ಎಚ್‌ಎಐ ಕೂಡ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಹಿಂದೆ ಸುರಂಗ ಮಾರ್ಗ ಬಂದ್ ಮಾಡಿದಾಗ ಬೊಬ್ಬೆ ಹೊಡೆದ ಎಂಎಲ್‌ಸಿ ಗಣಪತಿ ಉಳ್ವೇಕರ್ ಅವರಿಗೆ ಹೆದ್ದಾರಿ ಅವ್ಯವಸ್ಥೆಯ ಬಗ್ಗೆ ಅರಿವಿಲ್ಲವೇ...?ಅದರ ಬಗ್ಗೆ ಅವರೇಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶಸ್ನಿಸಿದರು. ಜನ ಸಹಕಾರ ನೀಡಿದರೆ ನಾನು ಜಿಲ್ಲೆಯ ಮೂರೂ ಟೋಲ್ ಬಂದ್ ಮಾಡಿಸುತ್ತೇನೆ ಎಂದರು.
ಖಡಕ್ ಪ್ರತ್ಯುತ್ತರ
ಅದಕ್ಕೆ ಉಳ್ವೇಕರ್ ಖಡಕ್ ಪ್ರತ್ಯುತ್ತರ ನೀಡಿದ್ದಾರೆ.
ಕಾರವಾರ ನಗರದ ಪ್ರವೇಶದ್ವಾರದಲ್ಲಿರುವ ಟನೆಲ್‌ಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಬುಧವಾರ ನನ್ನ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡಿದ್ದು ಇದೇ ಆರೋಪವನ್ನು ಕುಮಟಾದಲ್ಲಿ ನಡೆದ ಕೆಡಿಪಿ ಸಭೆಯಲ್ಲೂ ಮಾಡಿದ್ದಾರೆ.
ಇದೊಂದು ರಾಜಕೀಯ ಪ್ರೇರಿತ ಆರೋಪವಾಗಿದ್ದು, ಕಾರವಾರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಯಾವ ‘ವ್ಯವಹಾರ ನಡೆಸುವ ಉದ್ದೇಶದಿಂದ’ ಟೋಲ್‌ಗೇಟ್ ಬಂದ್ ಮಾಡದೇ ಜನರಿಗೆ ತೊಂದರೆಯಾಗುವ ರೀತಿಯಲ್ಲಿ ಟನೆಲ್ ಬಂದ್ ಮಾಡಿದ್ದರು ಎನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.
ಕಾಮಗಾರಿ ಗುಣಮಟ್ಟದ ದೃಷ್ಟಿಯಿಂದ ಅಧಿಕಾರಿಗಳನ್ನು ಪ್ರಶ್ನೆಮಾಡುವುದು ಜನಪ್ರತಿನಧಿಗಳ ಕರ್ತವ್ಯ. ಇದರಲ್ಲಿ ನಮ್ಮ ಆಕ್ಷೇಪಣೆ ಇಲ್ಲ. ಆದರೆ, ಎಂಎಲ್ ಸಿ ಉಳ್ವೇಕರ್ ಅವರು ಐಆರ್ ಬಿ ಪರ ನಿಂತು ಟನಲ್ ತೆರೆಯುವಂತೆ ಮಾಡಿದರು ಎಂಬ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಕಾರವಾರದಿಂದ ಭಟ್ಕಳದ ವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಅವೈಜ್ಞಾನಿಕವಾಗಿದ್ದರೆ, ಟನಲ್ ಬಂದ್ ಮಾಡುವ ಬದಲು ಟೋಲ್ ಗೇಟ್ ಬಂದ್ ಮಾಡಬಹುದಿತ್ತು. ಟೋಲ್ ಗೇಟ್ ಬಂದ್ ಮಾಡದೇ ಕೇವಲ ಟನಲ್ ಬಂದ್ ಮಾಡಿರುವುದು, ಯಾವ ಲೆಕ್ಕಾಚಾರಕ್ಕೆ ಎಂದು ಅರಿಯದಷ್ಟು ಮೂರ್ಖರಲ್ಲ ಜಿಲ್ಲೆಯ ಜನ.
ಸಾಮಾಜಿಕ ಹೋರಾಟದ ಮೂಲಕ ರಾಜಕೀಯಕ್ಕೆ ಬಂದವನು ನಾನು. ಯಾವುದೋ ಒಂದು ಕಂಪನಿಯ ಪರ ವಹಿಸಿ ಹೋರಾಟ ಮಾಡುವ ದೀನ ಪರಿಸ್ಥಿತಿಯಲ್ಲಿ ನಾನಿಲ್ಲ. ಎಂಬುದನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಟನಲ್ ಸಂಚಾರ ಸ್ಥಗಿತವಾದ ಸಂದರ್ಭದಲ್ಲಿ ನಡೆದ ಬಿಣಗಾ ಘಟ್ಟದ ನಾಲ್ಕು ಪ್ರತ್ಯೇಕ ಅಪಘಾತದಲ್ಲಿ ನಾಲ್ಕು ಜನ ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸಾವಿಗೆ ಹೊಣೆಗಾರಿಕೆಯನ್ನು ಟನಲ್ ಸಂಚಾರ ಬಂದ್ ಮಾಡಿದ ತಾವು ಹೊರುತ್ತಿರೋ? ಅಥವಾ ಕಾರವಾರ ಅಂಕೋಲಾ ವಿಧಾನಸಭಾ ಶಾಸಕರು ಹೊರುತ್ತಾರಾ? ಎಂಬುದು ನನ್ನ ನೇರ ಪ್ರಶ್ನೆಯಾಗಿದೆ.
ಈ ಸಾವು ನೋವುಗಳ ಹಿನ್ನೆಲೆಯಲ್ಲಿ ಕ್ಷೇತ್ರದ ಜನರ ಅಪೇಕ್ಷೆಯ ಮೇರೆಗೆ ಟನಲ್ ಅನ್ನು ಪುನಃ ಸಂಚಾರ ಮುಕ್ತವಾಗಿಸುವ ಕುರಿತು ಪಕ್ಷಾತೀತ ಹೋರಾಟಕ್ಕೆ ಕರೆ ನೀಡಲಾಗಿತ್ತು. ಅದರಂತೆ ಕಾರವಾರ ಅಂಕೋಲಾದ ಸರ್ವ ಪಕ್ಷಗಳ ನಾಯಕರ ಜೊತೆಗೂಡಿ ನ್ಯಾಯಯುತ ಹೋರಾಟ ನಡೆಸಿ ಜಯ ಸಾಧಿಸಿದ್ದೇವೆಯೇ ವಿನಃ ಯಾವ ಕಂಪನಿಯ ಪರ ವಹಿಸಿ ಅಲ್ಲ.
ಯಾರಿಗೂ ಅಧಿಕಾರ ಶಾಶ್ವತ ಅಲ್ಲ. ಅಧಿಕಾರದಲ್ಲಿ ಇದ್ದೇವೆ ಎಂಬ ಮಾತ್ರಕ್ಕೆ ಕೇವಲ ತಮ್ಮ ಲಾಭಕ್ಕಾಗಿ ರಾಜಕಾರಣ ಮಾಡುವುದನ್ನು ಬಿಟ್ಟು ಕ್ಷೇತ್ರದ ಹಿತದೃಷ್ಟಿಯಿಂದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಿ. ಜಿಲ್ಲೆಯ ಅಭಿವೃದ್ಧಿಗಾಗಿ ನಾನೂ ನಿಮಗೆ ಕೈಜೋಡಿಸುತ್ತೇನೆ.
ನಾನು ಯಾವಾಗಲೂ ಜನರಿಗೆ ಅನ್ಯಾಯವಾದರೆ ಅವರ ಪರ ನಿಲುತ್ತೇನೆ. ಯಾವುದೇ ಕಾರಣಕ್ಕೂ ಕಂಪನಿ ಪರ ನಿಲ್ಲುವುದಿಲ್ಲ. ಕಂಪನಿ ಪರ ಯಾರು ಇದ್ದಾರೆ, ಕಂಪನಿಯಿಂದ ಯಾವ ಯಾವ ಜನಪ್ರತಿನಿಧಿಗಳು ಏನೆಲ್ಲ ವ್ಯವಹಾರ ಮಾಡಿದ್ದಾರೆ? ಎಂದು ಮೊದಲು ಆತ್ಮಲೋಕನ ಮಾಡಿಕೊಳ್ಳಲಿ. ಇಲ್ಲವಾದರೆ ಅದನ್ನು ನಾನು ಬಹಿರಂಗ ಪಡಿಸಬೇಕಾಗಬಹುದು ಎಂದು ಉಳ್ವೇಕರ್ ಹೇಳಿಕೆ ನೀಡಿದ್ದಾರೆ.