ಕಾರವಾರ: ಕರಾವಳಿ ಹಾಗೂ ಬಯಲು ಸೀಮೆಯನ್ನು ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸಂಚಾರ ಬಂದಾಗಿರುವುದರಿಂದ ಅಗತ್ಯ ವಸ್ತುಗಳ ಸಾಗಣೆಗೆ ಅಡಚಣೆಯಾಗಿದೆ.
ಎನ್‌ಎಚ್ 66 ನಲ್ಲಿ ಕುಮಟಾ-ಅಂಕೋಲಾ ನಡುವೆ ಶಿರೂರಿನಲ್ಲಿ, ಹಾವೇರಿ-ಕುಮಟಾ ಎನ್‌ಎಚ್766ಇದಲ್ಲಿ ರಾಗಿ ಹೊಸಳ್ಳಿ ಸಮೀಪ ಗುಡ್ಡ ಕುಸಿತ ಉಂಟಾಗಿ ಬೃಹತ್ ವಾಹನ ಸಂಚಾರ ಬಂದ್ ಆಗಿ ನಾಲ್ಕು ದಿನ ಕಳೆದಿದೆ. ಇನ್ನೊಂದೆಡೆ ಧಾರವಾಡ-ಗೋವಾ ಎನ್‌ಎಚ್4ಎ ದಲ್ಲಿ ಭಾರಿ ವಾಹನ ಸಂಚಾರಕ್ಕೆ ನಿಷೇಧವಿದೆ. ಇದರಿಂದ ಹುಬ್ಬಳ್ಳಿಯಿಂದ ಮಂಗಳೂರು ಕಡೆಗೆ ತೆರಳುವ ಸಾಕಷ್ಟು ಟ್ಯಾಂಕರ್‌ಗಳು, ಬೃಹತ್ ಲಾರಿಗಳು ಹೆದ್ದಾರಿ ಪಕ್ಕ ನಿಂತುಕೊಂಡಿವೆ. ಈ ಅಡಚಣೆ ಮುಂದುವರಿದರೆ ಮಂಗಳೂರಿನಿಂದ ಉತ್ತರ ಕರ್ನಾಟಕ ಭಾಗಕ್ಕೆ ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ಉತ್ತರ ಕರ್ನಾಟಕದಿಂದ ಕರಾವಳಿ ಭಾಗಕ್ಕೆ ಹಣ್ಣು, ತರಕಾರಿ, ಧಾನ್ಯದ ಉತ್ಪನ್ನಗಳ ಕೊರತೆ ಉಂಟಾಗುವ ಸಾಧ್ಯತೆ ಇದೆ.
ಮಂಗಳೂರು ಎಂಆರ್‌ಪಿಎಲ್‌ನಿಂದ ತೈಲ ಉತ್ಪನ್ನಗಳನ್ನು ಪಡೆದು, ಬಿಪಿಸಿಎಲ್, ಎಚ್‌ಪಿಸಿಎಲ್ ಕಂಪನಿಗಳು ಇಡೀ ಕರ್ನಾಟಕ ಹಾಗೂ ಗೋವಾಕ್ಕೆ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಪೂರೈಸುತ್ತವೆ. ದಕ್ಷಿಣ ಕರ್ನಾಟಕದ ಬೆಂಗಳೂರಿಗೆ ಪೈಪ್‌ಲೈನ್ ವ್ಯವಸ್ಥೆ ಇದೆ. ಅಲ್ಲದೇ ಶಿರಾಡಿ ಘಾಟ್ ಮೂಲಕ ಉತ್ಪನ್ನಗಳು ಸಾಗಣೆಯಾಗುತ್ತವೆ. ಉತ್ತರ ಕರ್ನಾಟಕ ಭಾಗಗಳಿಗೆ ತೈಲ ಉತ್ಪನ್ನಗಳು ಮಂಗಳೂರಿನಿಂದ ಎನ್‌ಎಚ್ 66 ಹಾಗೂ ಎನ್‌ಎಚ್ 63 ಮಾರ್ಗವಾಗಿ ಸಂಚರಿಸುತ್ತವೆ.
ಇನ್ನು ಹುಬ್ಬಳ್ಳಿ, ಹಾವೇರಿ, ಬೆಳಗಾವಿ ಸೇರಿ ವಿವಿಧೆಡೆಯ ಎಪಿಎಂಸಿಗಳಿಂದ ವ್ಯಾಪಾರಸ್ಥರು ತಕಾರಿ, ಹಣ್ಣು, ಅಕ್ಕಿ, ಬೇಳೆ ಇತರ ವಸ್ತುಗಳನ್ನು ಇದೇ ಹೆದ್ದಾರಿ ಮೂಲಕ ಕರಾವಳಿಯ ಮೂರು ಜಿಲ್ಲೆಗಳಿಗೆ ಪೂರೈಸುತ್ತಾರೆ. ಆದರೆ, ಹೆದ್ದಾರಿ ಬಂದ್ ಆಗಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಶಿರಸಿ-ಸಿದ್ದಾಪುರ-ಮಾವಿನಗುಂಡಿ ಹೊನ್ನಾವರ ಮಾರ್ಗವಾಗಿ ಓಡಾಡಲು ಅವಕಾಶವಿದ್ದರೂ ಅಲ್ಲಿಯೂ ಆಗಾ ಮರ, ಗುಡ್ಡ ಬಿದ್ದು ಅಡಚಣೆಯಾಗುತ್ತಿದೆ.
ಆಸ್ಪತ್ರೆಗೆ ಹೋಗುವವರಿಗೂ ಅಡಚಣೆ:
ಕಾರವಾರ, ಅಂಕೋಲಾ ಭಾಗದಿಂದ ಮಂಗಳೂರು, ಉಡುಪಿ ಕಡೆಗೆ ಆಸ್ಪತ್ರೆಗೆ ತೆರಳುವವರಿಗೂ ಪ್ರಯಾಣ ಸುಖಕರವಾಗಿಲ್ಲ.
ಕುಮಟಾ-ಅಂಕೋಲಾ ನಡುವೆ ಹಿಲ್ಲೂರು-ಮಾದನಗೇರಿ ಮಾರ್ಗವಾಗಿ ಬಸ್ ಹಾಗೂ ಲಘು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ, ಗುರುವಾರ ರಾತ್ರಿ ರಸ್ತೆಯಲ್ಲಿ ಸ್ವಲ್ಪ ನೀರು ತುಂಬಿ ಸಣ್ಣ ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು. ಶುಕ್ರವಾರ ಮರ ಬಿದ್ದು ಸಮಸ್ಯೆಯಾಯಿತು. ದ್ದಾಪುರ-ಕುಮಟಾ ಮಾರ್ಗದಲ್ಲಿ ಮಣ್ಣು ಕುಸಿದಿದೆ.
ಜಿಲ್ಲೆಯ ಆರ್ಥಿಕ ವಹಿವಾಟಿಗೆ ಅಡ್ಡಿ
ನಿರಂತರ ಮಳೆಯ ಜತೆಗೆ ಪ್ರಮುಖ ರಸ್ತೆಗಳು ಬಂದಾಗಿರುವುದು ಉತ್ತರ ಕನ್ನಡ ಜಿಲ್ಲೆಯ ಆರ್ಥಿಕ ವಹಿವಾಟಿಗೆ ಅಡ್ಡಿಯಾಗಿದೆ. ಪ್ರವಾಸೋದ್ಯಮ ಚಟುವಟಿಕೆ ಸಂಪೂರ್ಣ ಬಂದಾಗಿದೆ. ಕೃಷಿ ಉತ್ಪನ್ನ ಸಾಗಣೆ, ನಿರ್ಮಾಣ ಕಾರ್ಯಗಳಿಗೂ ಈ ಹೆದ್ದಾರಿಗಳ ಸಂಚಾರ ಸಮಸ್ಯೆಯಿಂದ ಹೊಡೆತ ಬಿದ್ದಿದೆ.ಪ್ರಮುಖ ರಾಷ್ಟ್ರೀಯ ಹೆದ್ದಾರಿ ಬಂದಾಗಿ ಸಂಪರ್ಕ ಕಡಿತವಾಗಿರುವ ಅರಿವಿದೆ. ಆದರೆ, ಮತ್ತೆ, ಮತ್ತೆ ಗುಡ್ಡ ಕುಸಿತ ಮಳೆ ಮುಂದುವರಿದಿರುವುದರಿಂದ ನಾವೂ ಅಸಹಾಯಕರಾಗಿದ್ದೇವೆ. ಕುಮಟಾ-ಅಂಕೋಲಾ ನಡುವೆ ಎನ್‌ಎಚ್66 ನಲ್ಲಿ ಮಣ್ಣಿನ ತೆರವು ಕಾರ್ಯ ಇನ್ನೂ ನಡೆದಿದೆ.ಕೆ.ಲಕ್ಷ್ಮೀಪ್ರಿಯಾಜಿಲ್ಲಾಧಿಕಾರಿ ಉತ್ತರ ಕನ್ನಡ