ರಾಚಯ್ಯ ಸ್ವಾಮಿ ಮಾಚನೂರು
ರಾಯಚೂರು ಮಲೆನಾಡು ಹಾಗೂ ಮಹಾರಾಷ್ಟ್ರ ಭಾಗದ ವಿವಿಧ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಎಡೆದೊರೆ ನಾಡಿದ ಕೃಷ್ಣಾ ಹಾಗೂ ತುಂಗಾಭದ್ರ ನದಿಯಲ್ಲಿ ಒಂದು ಲಕ್ಷ ಕ್ಯೂಸೇಕ್ ನೀರು ಬಿಟ್ಟಿರುವುದರಿಂದ ಪ್ರತಿ ವರ್ಷದಂತೆ ಈ ವರ್ಷವು ಜಿಲ್ಲೆಯ 105 ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.
ಜಿಲ್ಲೆಯು ಎರಡು ನದಿಗಳನ್ನು ಒಳಗೊಂಡ ದೊಹಬ್ ಪ್ರದೇಶ ಎಂದೇ ಗುರುತ್ತಿಸಿಕೊಂಡಿದೆ. ನದಿ ಪಾತ್ರದ ಗ್ರಾಮಗಳಿಗೆ ಪ್ರತಿ ವರ್ಷ ಪ್ರವಾಹ ಭೀತಿ ಎದುರಾಗುತ್ತಿರುವುದು ಜಿಲ್ಲಾಡಳಿತ ಹಾಗೂ ಸರ್ಕಾರದ ಗಮಕ್ಕಿದ್ದರು, ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ನದಿಪಾತ್ರದ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಎರಡು ನದಿಗಳ ದಡದಲ್ಲಿ ಎಷ್ಟು ಗ್ರಾಮಗಳು?
ಕೃಷ್ಣಾ ನದಿಯು ಜಿಲ್ಲೆಯ ಲಿಂಗಸೂಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕಿನಲ್ಲಿ ಒಟ್ಟು 72 ಗ್ರಾಮಗಳು ದಡದಲ್ಲಿ ಬರುತ್ತಿದ್ದು, ಈ ಪೈಕಿ ಲಿಂಗಸೂಗೂರು ತಾಲೂಕಿನ 13 ಗ್ರಾಮಗಳಿಗೆ,ದೇವದುರ್ಗ ತಾಲೂಕಿನ 42 ಗ್ರಾಮಗಳಿಗೆ ಕೃಷ್ಣಾ ನದಿಯಿಂದ 4.5ರಿಂದ 7 ಲಕ್ಷ ಕ್ಯೂಸೆಕ್ ನೀರು ಬಂದರೆ ಪ್ರವಾಹ ಭೀತಿ ಎದುರಾಗುತ್ತದೆ. ಆದರಂತೆ ರಾಯಚೂರು ತಾಲೂಕಿನ 17 ಗ್ರಾಮಗಳಿಗೆ 6 ರಿಂದ 7 ಲಕ್ಷ ಕ್ಯೂಸೆಕ್ ನೀರು ಬಂದರೆ ಪ್ರವಾಹ ಭೀತಿ ಎದುರಾಗುತ್ತದೆ.
ಅದರಂತೆ ತುಂಗಭದ್ರಾ ಡ್ಯಾಂನಿಂದ ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಬಿಟ್ಟರೆ ಜಿಲ್ಲೆಯ 33 ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವ ಸಾಧ್ಯತೆಗಳಿವೆ. ಈ ಪೈಕಿ ಸಿಂಧನೂರು ತಾಲೂಕಿನಲ್ಲಿ 13 ಗ್ರಾಮಗಳು,ಮಾನ್ವಿ ತಾಲೂಕಿನಲ್ಲಿ 11 ಗ್ರಾಮಗಳು ಹಾಗೂ ರಾಯಚೂರು ತಾಲೂಕಿನಲ್ಲಿ 9 ಗ್ರಾಮಗಳಿಗೆ ನದಿಯಿಂದ 3 ರಿಂದ 5 ಲಕ್ಷ ಕ್ಯೂಸೆಕ್ ನೀರು ಬಿಟ್ಟರೆ ಪ್ರವಾಹ ಭೀತಿ ಎದುರಾಗುತ್ತದೆ.
ಎಷ್ಟು ಕುಟುಂಬಗಳು ವಾಸ
ಜಿಲ್ಲೆಯ ಕೃಷ್ಣಾ ಹಾಗೂ ತುಂಗಾಭದ್ರ ನದಿ ಪಾತ್ರದಲ್ಲಿ ಸುಮಾರು 28,970 ಕುಟುಂಬಗಳ ಪೈಕಿ 142,938 ಜನರು ವಾಸಮಾಡುತ್ತಿದ್ದು,ಈ ಪೈಕಿ ತುಂಗಾಭದ್ರ ನದಿ ಪಾತ್ರದಲ್ಲಿನ ಸಿಂಧನೂರು ತಾಲೂಕಿನಲ್ಲಿ 4976 ಕುಟುಂಬಗಳಲ್ಲಿ 26050 ಜನ ವಾಸ ಮಾಡುತ್ತಿದ್ದು, ಮಾನ್ವಿ ತಾಲೂಕಿನಲ್ಲಿ 5,031 ಕುಟುಂಬಗಳಲ್ಲಿ 16,391 ಜನ ವಾಸ ಮಾಡುತ್ತಿದ್ದಾರೆ.ರಾಯಚೂರು ತಾಲೂಕಿನಲ್ಲಿ 3,945 ಕುಟುಂಬಗಳಲ್ಲಿ 18,329 ಜನ ವಾಸ ಮಾಡುತ್ತಿದ್ದಾರೆ,ಆದರಂತೆ ಕೃಷ್ಣಾ ನದಿ ಪಾತ್ರದ ಗ್ರಾಮಗಳ ಪೈಕಿ ಲಿಂಗಸೂಗೂರು ತಾಲೂಕಿನಲ್ಲಿ 1845 ಕುಟುಂಬಗಳಲ್ಲಿ 11,263 ಜನ ವಾಸ ಮಾಡುತ್ತಿದ್ದಾರೆ. ದೇವದುರ್ಗ ತಾಲೂಕಿನಲ್ಲಿ 7,344 ಕುಟುಂಬಗಳಲ್ಲಿ 41,000 ಜನ ವಾಸ ಮಾಡುತ್ತಿದಾರೆ.ರಾಯಚೂರು ತಾಲೂಕಿನಲ್ಲಿ 5,829 ಕುಟುಂಬಗಳಲ್ಲಿ 29,905 ಜನ ವಾಸ ಮಾಡುತ್ತಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಎರಡು ನದಿಗಳ ನೀರಿನ ಮಟ್ಟ
ಪ್ರಸ್ತುತ ಅಲಮಟ್ಟಿ ಜಲಾಶಯದಿಂದ ಕೃಷ್ಟಾ ನದಿಗೆ 1.15 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಿದ್ದು, ಒಳ ಹರಿವು 1.10 ಲಕ್ಷ ಕ್ಯೂಸೆಕ್, ಹೊರ ಹರಿವು 1.15 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದೆ.ಆದರಂತೆ ತುಂಗಾಭದ್ರ ಜಲಾಶಯದಿಂದ ತುಂಗಾಭದ್ರ ನದಿಗೆ 80,000 ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಒಳ ಹರಿವು 54,500 ಕ್ಯೂಸೆಕ್ ಇದ್ದು, ಹೊರ ಹರಿವು 61,645 ಕ್ಸೂಸೆಕ್ ನೀರು ಇದೆ. ತುಂಗಭದ್ರಾ ಹಾಗೂ ಕಷ್ಣಾ ನದಿಗಳಲ್ಲಿ ನೀರು ಹರಿವಿನ ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಎನ್‌ಡಿಆರ್‌ಎಫ್ ತಂಡ ಅಗಮಿಸಿದ್ದು, ಪ್ರವಾಹದ ವೇಳೆ ನದಿ ಪಾತ್ರದ ಜನರ ರಕ್ಷಣೆಗೆ ಮತ್ತು ಪರಿಸ್ಥಿತಿಯನ್ನು ನೀಭಾಯಿಸಲು ಈ ತಂಡಗಳು ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿವೆ.
ಮಲೆನಾಡು ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಕೃಷ್ಣಾ ಹಾಗೂ ತುಂಗಾಭದ್ರ ನದಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿರುವುದರಿಂದ ನದಿ ಪಾತ್ರದ ಜನರಿಗೆ ಜಾಗೃತಿ ಮೂಡಿಸಲಾಗಿದೆ. ಪ್ರವಾಹ ಭೀತಿಯನ್ನು ಎದುರಿಸಲು ಜಿಲ್ಲಾಡಳಿತದಿಂದ ಪ್ರತಿ ತಾಲೂಕಿನಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ತಂಡಗಳಲ್ಲಿ ರಚಿಸಲಾಗಿದ್ದು, ಅಗತ್ಯವಿರುವ ಗ್ರಾಮಗಳಲ್ಲಿ ಸಾತ್ವನ ಕೇಂದ್ರ ಆರಂಭಿಸಲು ಸೂಚನೆ ನೀಡಲಾಗಿದೆ.
ನಿತೀಶ್ ಕೆ., ಜಿಲ್ಲಾಧಿಕಾರಿ ರಾಯಚೂರು