ಬೆಳ್ತಂಗಡಿ: ಗ್ರಾಮೀಣ ಭಾಗದ ರಸ್ತೆಗಳು, ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಬೆಳ್ತಂಗಡಿ ತಾಲೂಕು ರಾಜ್ಯದಲ್ಲೇ ಮಾದರಿ. ವೇಗ ಪಡೆಯುತ್ತಿರುವ ನಡುವೆ ತಾಲೂಕಿನ 55 ಸರ್ಕಾರಿ ಶಾಲೆಗಳ ಶೌಚಗೃಹಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ.
ಸರ್ಕಾರಿ ಶಾಲೆಗಳಲ್ಲಿ ಶೌಚಗೃಹ ಕೊರತೆ ನೀಗಿಸುವ ಜತೆಗೆ ಸರ್ಕಾರಿ ಶಾಲೆಗಳ ಸಬಲೀಕರಣದ ಉದ್ದೇಶದಿಂದ ಶಾಸಕ ಹರೀಶ್ ಪೂಂಜ ಅವರ ಮನವಿ ಮೇರೆಗೆ, ಮಂಗಳೂರು ರಿಫೈನರಿ ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂ.ಆರ್.ಪಿ.ಎಲ್) ಅವರ ಸಿ.ಎಸ್.ಆರ್. ಅನುದಾನದಿಂದ ತಾಲೂಕಿನ 55 ಸರ್ಕಾರಿ ಶಾಲೆಗಳಲ್ಲಿ ಶೌಚಗೃಹ ನಿರ್ಮಾಣಕ್ಕೆ ತಲಾ 10 ಲಕ್ಷ ರೂ.ನಂತೆ 5.50 ಕೋಟಿ ರೂ. ಒದಗಿಸಲಾಗಿತ್ತು.
ಮೂರು ಹಂತಗಳಲ್ಲಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕಾಮಗಾರಿಯನ್ನು 6 ತಿಂಗಳ ಒಳಗಾಗಿ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿತ್ತಾದರೂ ಕೋವಿಡ್ ಸಮಸ್ಯೆ ಎದುರಾದ್ದರಿಂದ ವಿಳಂಬ ಎದುರಿಸಿತ್ತು. ಪ್ರಸಕ್ತ ಎಲ್ಲವನ್ನು ನಿಭಾಯಿಸಿ ಕೇವಲ ಮೂರು ತಿಂಗಳ ಅವಧಿಯಲ್ಲಿ ಉದ್ಘಾಟನೆಗೊಂಡು ಒಂದು ವರ್ಷದ ಒಳಗಾಗಿ ತಾಲೂಕಿನ 50 ಶಾಲೆಗಳ ಶೌಚಗೃಹಗಳನ್ನು ಶೇ.95ರಷ್ಟು ಕಾಮಗಾರಿ ಪೂರ್ಣಗೊಳಿಸಲಾಗಿದೆ. ಕೇವಲ 5 ಶಾಲೆಗಳ ಕಾಮಗಾರಿ ಪ್ರಗತಿಯಲ್ಲಿದೆೆ. ಗುತ್ತಿಗೆದಾರ ಉಜಿರೆಯ ಗಣೇಶ್, ಗುಣಮಟ್ಟದ ಕಾಮಗಾರಿ ಕೈಗೊಳ್ಳುವ ಮೂಲಕ ಎಂ.ಆರ್.ಪಿ.ಎಲ್. ಸಂಸ್ಥೆ ಅಧಿಕಾರಿಗಳು ಪ್ರಶಂಸಿಸಿದ್ದು ಶೀಘ್ರವೇ ಉದ್ಘಾಟನೆಗೂ ಸಜ್ಜಾಗಿ ನಿಂತಿದೆ.
ಗುಣಮಟ್ಟ, ಆಧುನಿಕ ಸ್ಪರ್ಶ: ದ.ಕ. ಜಿಲ್ಲೆಯಲ್ಲೇ ಸರ್ಕಾರಿ ಶಾಲೆಗಳ ಶೌಚಗೃಹ ಅಭಿವೃದ್ಧಿಗೆ ಎಂಆರ್‌ಪಿಎಲ್ ಅತೀ ಹೆಚ್ಚು ಅನುದಾನ ಒದಗಿಸಿತ್ತು. ಇದನ್ನು ಸಮರ್ಪಕವಾಗಿ ಸದ್ವಿನಿಯೋಗಿಸುವ ಮೂಲಕ ಜಿಲ್ಲೆಗೆ ಬೆಳ್ತಂಗಡಿ ತಾಲೂಕು ಮಾದರಿಯಾಗಿದೆ. ಬಾಲಕ ಮತ್ತು ಬಾಲಕಿಯರ ಪ್ರತ್ಯೇಕ ವಿಭಾಗವುಳ್ಳ ಶೌಚಗೃಹಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದೆ. ಟೈಲ್ಸ್ ಹಾಗೂ ಆಧುನಿಕ ಕಮೋಡ್ ಬಳಸಲಾಗಿದೆ. ಸ್ವಚ್ಛತೆ ಹಾಗೂ ಕಾಮಗಾರಿ ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದೆ.
ಗ್ರಾಮ ಉನ್ನತಿಯೊಂದಿಗೆ ಶಾಲೆಯ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿದೆ. ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಶೌಚಗೃಹದ ಕೊರತೆ ಗಮನಿಸಿ, ಎಂಆರ್‌ಪಿಎಲ್‌ಗೆ ನೂರು ಶೌಚಗೃಹಕ್ಕಾಗಿ ಮನವಿ ಮಾಡಲಾಗಿತ್ತು. ನಮ್ಮ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಎಂ.ಆರ್.ಪಿ.ಎಲ್. ಅಧಿಕಾರಿಗಳು ತಾಲೂಕಿಗೆ 55 ಶೌಚಗೃಹಕ್ಕಾಗಿ ಏಕಕಾಲದಲ್ಲಿ ಅನುದಾನ ನೀಡಿದ್ದಾರೆ. -ಹರೀಶ್ ಪೂಂಜ, ಶಾಸಕರು ಶಾಸಕ ಹರೀಶ್ ಪೂಂಜ ವಿನಂತಿ ಮೇರೆಗೆ ಬೆಳ್ತಂಗಡಿ ತಾಲೂಕಿಗೆ 55 ಶಾಲೆಗಳ ಶೌಚಗೃಹ ನಿರ್ಮಾಣಕ್ಕೆ ಎಂಎಆರ್‌ಪಿಎಲ್‌ನ ಸಿಎಸ್‌ಆರ್‌ನಿಂದ ಪ್ರಥಮವಾಗಿ 20, ಎರಡನೇ ಹಂತದಲ್ಲಿ 35 ಶೌಚಗೃಹಗಳಿಗೆ ಅನುದಾನ ಒದಗಿಸಲಾಗಿತ್ತು. ಗುಣಮಟ್ಟದ ಕಾಮಗಾರಿ ಮೂಡಿಬಂದಿದೆ. -ವೀಣಾ ಟಿ.ಶೆಟ್ಟಿ, ಡಿಜಿಎಂ, ಎಂಆರ್‌ಪಿಎಲ್ ಸಿಎಸ್‌ಆರ್ ವಿಭಾಗ