ಜಿಲ್ಲೆ

ಕಡ್ಲೇಗುದ್ದಿನ ಪ್ರೌಢಶಾಲೆಯಲ್ಲಿ ವಿಜ್ಞಾನ ರಸಪ್ರಶ್ನೆ: ತೇಜಸ್ ಪ್ರಥಮ

ಸಿರಿಗೆರೆ: ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಬುಧವಾರ ಕಡ್ಲೆಗುದ್ದಿನ ಶ್ರೀ ಆಂಜನೇಯಸ್ವಾಮಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಕೌನ್ ಬನೇಗಾ ವಿಜ್ಞಾನಾಧಿಪತಿ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜ್ಞಾನ ದಿನಾಚರಣೆಗೆ ಸಂಬಂಧಿತ ಪ್ರಶ್ನೆಗಳ ಮೊದಲ ಸುತ್ತಿನಲ್ಲಿ 175 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ಅಧಿಕ ಅಂಕ ಪಡೆದ ಮೊದಲ 10 ಮಕ್ಕಳನ್ನು ಹಾಟ್‌ಸೀಟ್‌ಗೆ ಆಯ್ಕೆ ಮಾಡಲಾಯಿತು.

ಅಂತಿಮವಾಗಿ 8ನೇ ತರಗತಿಯ ತೇಜಸ್, 9ನೇ ಕ್ಲಾಸಿನ ಕವಿತಾ, ಎಸ್‌ಎಸ್‌ಎಲ್‌ಸಿಯ ಪವಿತ್ರಾ ಕ್ರಮವಾಗಿ 8, 7, 6 ಪುಸ್ತಕಗಳನ್ನು ಬಹುಮಾನವಾಗಿ ಪಡೆದರು.

ಕೋಟ್ಯಧಿಪತಿಯಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಆಸೆ ಇತ್ತು. ಇಂದು ಶಾಲೆಯಲ್ಲಿ ಶಿಕ್ಷಕರು ನಡೆಸಿಕೊಟ್ಟ ರಸಪ್ರಶ್ನೆ ಸ್ಪರ್ಧೆ ಅದೇ ಅನುಭವ ನೀಡಿತು ಎಂದು ದ್ವಿತೀಯ ಬಹುಮಾನ ಪಡೆದ ವಿದ್ಯಾರ್ಥಿನಿ ಕವಿತಾ ಅನಿಸಿಕೆ ವ್ಯಕ್ತಪಡಿಸಿದರು.

ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ, ಕುತೂಹಲ ಮೂಡಿಸಲು ಇಂತಹ ಸ್ಪರ್ಧೆಗಳ ಆಯೋಜನೆ ಅವಶ್ಯಕ ಎಂದು ಮುಖ್ಯಶಿಕ್ಷಕ ಮಹೇಶ್ ತಿಳಿಸಿದರು. ಶಿಕ್ಷಕರಾದ ಮಂಜಪ್ಪ, ನಟರಾಜ್, ಕರಿಬಸಪ್ಪ, ನಾಗರಾಜ್, ಮಂಜುನಾಥ್, ಮಹಾಂತೇಶ್ ಇತರರಿದ್ದರು.