ಜಿಲ್ಲೆ

ನನ್ನ ಸಾಧನೆಗೆ ಬಾಲ್ಯದ ಪರಿಶ್ರಮವೇ ಕಾರಣ : ಡಾ. ಜಿ.ಬಿ ಬೀಡಿನಹಾಳ

ಗದಗ : ಕೃಷಿ ಹಿನ್ನೆಲೆಯ ಕುಟುಂಬದವನಾದ ನಾನು ಬಾಲ್ಯದಲ್ಲೇ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದೆ, ಮ್ಯಾರೆಥಾನ್ ಓಟದಲ್ಲಿ ನಾನು ಗಳಿಸುತ್ತಿರುವ ಸತತ ಯಶಸ್ಸಿಗೆ ಬಾಲ್ಯದ ದೈಹಿಕ ಪರಿಶ್ರಮವೇ ಕಾರಣವಾಗಿದೆ ಎಂದು ವೈದ್ಯರು ಹಾಗೂ ಇತ್ತೀಚೆಗೆ ಅಖಿಲ ಭಾರತ ವೈದ್ಯರ ಮ್ಯಾರೆಥಾನ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದ ಡಾ. ಜಿ.ಬಿ ಬೀಡಿನಹಾಳ ನುಡಿದರು.
ಅವರು ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಸಿರಿಗೆರೆಯ ಶ್ರೀ ಗುರು ಮುದುಕೇಶ್ವರ ಪ್ರೌಢಶಾಲೆ, ಕಲಕೇರಿ ಮತ್ತು ಎಂ.ಬಿ.ಪಾಟೀಲ್ ಪದವಿ ಪೂರ್ವ ಮಹಾವಿದ್ಯಾಲಯ ಕಲಕೇರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ದತ್ತಿ ಉಪನ್ಯಾಸ, ಸನ್ಮಾನ ಮತ್ತು ಸ್ವಾಮಿ ವಿವೇಕಾನಂದ ಜಯಂತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾವು ಕಲಿತ ಪ್ರೌಢಶಾಲೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ,
ಇತ್ತೀಚಿನ ದಿನಗಳಲ್ಲಿ ದೈಹಿಕ ಶ್ರಮ ಕ್ಷೀಣಿಸುತ್ತಿದ್ದು, ನಾವು ಒಕ್ಕಲುತನದಲ್ಲಿ ಮೈ-ಕೈ ಗಟ್ಟಿಮುಟ್ಟಾಗಿಸಿಕೊಂಡ ಫಲವಾಗಿ ಆರೋಗ್ಯಯುತ ಜೀವನ ಸಾಧ್ಯವಾಗಿದೆ. ಇತ್ತೀಚೆಗೆ ಜರುಗಿದ ಅಖಿಲ ಭಾರತ ವೈದ್ಯರುಗಳ ಆಟೋಟ ಸ್ಪರ್ಧೆಗಳಲ್ಲಿ ೨೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ೧೦ ಕಿ.ಮೀಗಳ ಮ್ಯಾರಥಾನ್ ನಲ್ಲಿ ಪ್ರಥಮ ಸ್ಥಾನ, ಹತ್ತು ಕಿಲೋಮೀಟರ್ಗಳ ವಾಕಥಾನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮತ್ತು ಅದೇ ರೀತಿ ನಾಲ್ಕು ನೂರು ಮೀಟರ್ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಕ್ಕೆ ದೈನಂದಿನ ಶಿಸ್ತು ಹಾಗೂ ಶ್ರಮ ಕಾರಣ ಎಂದರು.
ಕಲಕೇರಿಯ ಶ್ರೀ ಗುರು ಮುದಕೇಶ್ವರ ಶಾಲೆಯಲ್ಲಿ ತಾವು ವ್ಯಾಸಂಗ ಮಾಡಿದ ದಿನಗಳನ್ನು ಮೆಲಕು ಹಾಕಿದ ಅವರು ಶಿಕ್ಷಕರು ಹೇಳಿದಂತೆ ಓದಿನಲ್ಲಿ ತೊಡಗಿಸಿಕೊಂಡು ಶ್ರದ್ಧೆಯಿಂದ ಕಲಿತ ಫಲವಾಗಿ ಜನಾನುರಾಗಿ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದರು. ತಮ್ಮ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ತಂದೆ ತಾಯಿಗಳ ಮತ್ತು ಶಾಲೆಯ ಎಲ್ಲಾ ಗುರು ವೃಂದದ ಅದರಲ್ಲೂ ವಿಶೇಷವಾಗಿ ಗುರುಗಳಾದ ಪಿಎಮ್ ಪಾಟೀಲ್ ಅವರ ಬೆಂಬಲ ಮತ್ತು ಕೃಪಾಶೀರ್ವಾದ ತಮ್ಮ ಮೇಲಿದೆ ಎಂದು ಹೇಳಿದರು. ತಾನು ಕಲಿತ ಶಾಲೆಯಲ್ಲಿ ತನಗೆ ಪತ್ನಿ ಸಮೇತ ಸನ್ಮಾನ ದೊರೆತಿರುವುದು ಹೆಚ್ಚು ಸಂತಸ ನೀಡಿದೆ ಎಂದು ಭಾವುಕರಾಗಿ ನುಡಿದರು.ವಿವೇಕಾನಂದ ಜಯಂತಿ ನಿಮಿತ್ಯ ವಿವೇಕಾನಂದರ ಕುರಿತು ಮಾತನಾಡುತ್ತಾ ಅವರ ಜಯಂತಿಯನ್ನು ವಿಶ್ವ ಯುವ ದಿನವಾಗಿ ಆಚರಿಸುತ್ತಿರುವ ವಿಶಿಷ್ಠತೆಯನ್ನು ವಿವರಿಸಿದರು.
. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಹಕಾರ ಸಚಿವರಾದ ಶ್ರೀಯುತ ಎಸ್ ಎಸ್ ಪಾಟೀಲ್ ರವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಮಕ್ಕಳು ಯಾವ ರೀತಿ ತಮ್ಮ ಜ್ಞಾನದ ವಿಸ್ತಾರವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು. ಮಕ್ಕಳ ಬೆಳವಣಿಗೆಗೆ ಪ್ರಾರಂಭದಲ್ಲಿ ತಂದೆ ತಾಯಿಗಳು ಕಾರಣರಾದರೆ ಮುಂದೆ ಅವರ ಹೊಟ್ಟೆ ಮತ್ತು ನೆತ್ತಿಯನ್ನು ಕಾಯುವ ಮತ್ತು ಅವರ ಮನೆ ಮನಗಳನ್ನು ಬೆಳಗುವ ಮಕ್ಕಳನ್ನು ಪಾಲಿಸುವ ಪತ್ನಿ ಕಾರಣಳು ಎಂದು ಹೇಳಿದರು.ತಮ್ಮ ಕಣ್ಣ ಮುಂದೆ ಬೆಳೆದ ಗುರುಲಿಂಗಪ್ಪ ಪ್ರಸಿದ್ಧ ವೈದ್ಯನಾಗಿ ಜನ ಸೇವಕನಾಗಿ ಕಾರ್ಯನಿರ್ವಹಿಸಿದ ಬಗೆಯನ್ನು ಸವಿಸ್ತಾರವಾಗಿ ಹೇಳಿದ ಅವರು ಡಾ. ಬೀಡನಾಳ್ ಮತ್ತು ಅವರ ಪತ್ನಿಯನ್ನು ಅನುರೂಪ ದಂಪತಿಗಳು ಎಂದು ಮೆಚ್ಚಿ ಹಾರೈಸಿದರು.
ಮಾಜಿ ಸಹಕಾರ ಸಚಿವರಾದ ಎಸ್. ಎಸ್. ಪಾಟೀಲ್ ಅವರು ನೀಡಿರುವ ದತ್ತಿ ನಿಧಿಯ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪೇಕ್ಷಿತ ವಚನಕಾರ್ತಿಯರ ಕುರಿತಾಗಿ ಶ್ರೀ ಯೋಗಿ ವೇಮನ ಪದವಿ ಕಾಲೇಜು, ಬೆಳ್ಳಟ್ಟಿಯ ಪ್ರಾಧ್ಯಾಪಕರಾದ ಮೀನಾಕ್ಷಿ ರಾಜೂರ ಅವರು ಉಪನ್ಯಾಸ ನೀಡಿದರು. ರೆಮ್ಮವ್ವೆ, ಕಾಳವ್ವೆ, ಗೊಗ್ಗವ್ವೆ,ಗಂಗಮ್ಮ, ಆಯ್ದಕ್ಕಿ ಲಕ್ಕಮ್ಮ, ದುಗ್ಗಳೇ ಮುಂತಾದ ವಚನಕಾರ್ತಿಯರ ಬದುಕು ಮತ್ತು ವಚನಗಳ ಮೇಲೆ ಬೆಳಕು ಚೆಲ್ಲಿದರು. ಅವರ ಅನುಭವದ ನುಡಿಗಳೇ ವಚನಗಳಾದ ರೀತಿಯನ್ನು ಶರಣ ಧರ್ಮದ ಕಾಯಕನಿಷ್ಠೆ ಮತ್ತು ದಾಸೋಹವನ್ನು ಕುರಿತು ಕೊಂಡಾಡಿದರು. ೧೨ನೇ ಶತಮಾನದ ವಚನಕಾರ್ತಿಯರ ಜೀವನ ಮತ್ತು ಇಂದಿನ ಮಹಿಳೆಯರ ಜೀವನಕ್ಕೆ ಇರುವ ವ್ಯತ್ಯಾಸವನ್ನು ವಿಡಂಬನಾತ್ಮಕವಾಗಿ ತಿಳಿಸಿದರು.ಲಿಂಗೈಕ್ಯ ಅನ್ನಪೂರ್ಣಮ್ಮ. ಎ. ಹಿರೇಮಠರವರ ಸ್ಮರಣಾರ್ಥ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಯುವ ದಿನದ ಆಚರಣೆಯ ಅಂಗವಾಗಿ ನಡೆದ ದತ್ತಿ ಉಪನ್ಯಾಸ ನೀಡಿದ ಹೆಸರೂರು ಪ್ರೌಢಶಾಲೆಯ ಶಿಕ್ಷಕರಾದ ಎಚ್.ಎಸ್ ಮಹೇಶ್ ರವರು ಸ್ವಾಮಿ ವಿವೇಕಾನಂದರ ಜೀವನ ಕುರಿತು ಮಾತನಾಡಿದರು.
ಶಾಲೆಯ ನಿವೃತ್ತ ಶಿಕ್ಷಕರಾದ ಪಿ.ಎಮ್. ಪಾಟೀಲ್ ರವರು ತಮ್ಮ ಶಿಷ್ಯ ಗುರುಲಿಂಗಪ್ಪ ಬಿಡ್ನಾಳ್ ಶಾಲಾ ದಿನಗಳನ್ನು ನೆನೆದರು. ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ದಿಟ್ಟ ಮತ್ತು ಎಲ್ಲ ಕೆಲಸಕ್ಕೂ ಮುನ್ನುಗ್ಗುತ್ತಿದ್ದ ತಮ್ಮ ಶಿಷ್ಯನ ಸಾಧನೆಯ ಕುರಿತು ಹೆಮ್ಮೆ ವ್ಯಕ್ತಪಡಿಸಿದ ಅವರು ಅವರೊಂದಿಗೆ ಅದೇ ಶಾಲೆಯಲ್ಲಿ ಓದಿದ ಅವರ ಪತ್ನಿಯನ್ನು ಕೂಡ ಮಕ್ಕಳಿಗೆ ಪರಿಚಯಿಸಿ ಅವರಿಬ್ಬರ ಸಾಮಾಜಿಕ ಸೇವೆಯನ್ನು ಕೊಂಡಾಡಿದರು.
ಶಾಲೆಯ ಮುಖ್ಯ ಶಿಕ್ಷಕರಾದ ಎಂ ಎಸ್ ರಾಥೋಡ್ ಗುರುಗಳು ಎಲ್ಲರನ್ನು ಸ್ವಾಗತಿಸಿದರು. ಶಾಲೆಯ ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸನ್ಮಾನ ಕಾರ್ಯಕ್ರಮದ ನಂತರ ಮಕ್ಕಳಿಂದ ವಚನ ಗೀತೆಗಳು,ಕನ್ನಡ ನಾಡು ನುಡಿ ಕುರಿತ ಮನರಂಜನೆ ಕಾರ್ಯಕ್ರಮ ನಡೆಯಿತು. ಕವಿಗಳಾದ ಕಳಕಪ್ಪ ಜಲ್ಲಿಗೇರಿ ಮತ್ತು ಕೊಟ್ರೇಶ್ ಜವಳಿ ಅವರು ತಮ್ಮ ಸ್ವರಚಿತ ಕವನ ವಾಚನ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ ಜಿ ಗಚ್ಛಣ್ಣವರ್, ಎಂ ಬಿ ಪಾಟೀಲ್ ಕಾಲೇಜಿನ ಪ್ರಾಚಾರ್ಯರಾದ ಸುವರ್ಣ ಸುತಾರ್, ಸಾಹಿತ್ಯ ಪರಿಷತ್ತಿನ ಸದಸ್ಯರಾದ ಕೃಷ್ಣ ಪರಾಪುರ್, ಮಧುಮತಿ ಇಳಕಲ್, ಕಲಕೇರಿ ಗ್ರಾಮದ ಬಸವಂತಪ್ಪ ದೇಸಾಯಿ ಮತ್ತು ಹುಳಕಣ್ಣವರ ಅವರು ಉಪಸ್ಥಿತರಿದ್ದರು. ಶ್ರೀ ಗುರು ಮುದುಕೇಶ್ವರ ಪ್ರೌಢಶಾಲೆ ಕಲಕೇರಿ ಮತ್ತು ಎಂ ಬಿ ಪಾಟೀಲ್ ಪದವಿ ಕಾಲೇಜಿನ ಪದವಿಪೂರ್ವ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಹಾಜರಾಗಿದ್ದು ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.