ಜಿಲ್ಲೆ

ಪ್ರೌಢಶಾಲಾ ಮಟ್ಟದ ಕಬಡ್ಡಿ : ಪಂದ್ಯಾಟಕ್ಕೆ ಮ್ಯಾಟ್ ಬಳಸಿದ ಅಂಗಳ ಬಳಕೆ

ಸೌಮ್ಯ ಆರ್

ಉಳ್ಳಾಲ: ಕರ್ಣಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ, ಮೇಲಂಗಡಿ ಸರ್ಕಾರಿ ಉರ್ದು ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಉಳ್ಳಾಲ ವಲಯ ಪ್ರೌಢಶಾಲಾ ಮಟ್ಟದ ಕಬಡ್ಡಿ ಪಂದ್ಯಾಟ ಬುಧವಾರ ನಗರಸಭಾ ಮೈದಾನದಲ್ಲಿ ನಡೆಯಿತು.

ಸರ್ಕಾರಿ ವ್ಯವಸ್ಥೆಯಡಿ ನಡೆಯುವ ಶಾಲಾ ಮಟ್ಟದ ಕಾರ್ಯಕ್ರಮ, ಕ್ರೀಡಾಕೂಟಗಳ ಬಗ್ಗೆ ಜನರಲ್ಲಿ ತಾತ್ಸಾರ ಭಾವನೆಯಿದೆ. ಸರ್ಕಾರದ ನೂರೊಂದು ನಿಯಮಗಳು ಇರುತ್ತವೆ. ಮಕ್ಕಳ ಹಿತ ಬಯಸುವ ಉತ್ಸಾಹಿತ ಶಾಲಾಭಿವೃದ್ಧಿ ಸಮಿತಿ, ಶಿಕ್ಷಕ ವರ್ಗ ದಾನಿಗಳ ಮನೆಬಾಗಿಲು ತಟ್ಟಿ ಕಾರ್ಯಕ್ರಮ ತಕ್ಕಮಟ್ಟಿನ ಯಶಸ್ಸಿಗೆ ಪಾತ್ರರಾಗುತ್ತಾರೆ. ಆದರೆ ದಾನಿಗಳೇ ಇಲ್ಲದ, ಹೆಸರಿಗಷ್ಟೇ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿ, ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ಇಲ್ಲದ ಶಿಕ್ಷಕರಿದ್ದರೆ ಸರ್ಕಾರಿ ಮಟ್ಟದ ಯಾವುದೇ ಕಾರ್ಯಕ್ರಮಕ್ಕೆ ಮುಂದಾಗುವುದಿಲ್ಲ. ಇಲಾಖೆ ಒತ್ತಾಯಪೂರ್ವಕ ಕೊಟ್ಟರೂ ಕಾರ್ಯಕ್ರಮ ಹೆಸರಿಗಷ್ಟೇ ನಡೆಯುತ್ತದೆ. ಬುಧವಾರ ಉಳ್ಳಾಲದಲ್ಲಿ ನಡೆದ ಕಬಡ್ಡಿ ಪಂದ್ಯಾಟ ಎಲ್ಲವನ್ನೂ ಮೀರಿದೆ.

ಎಸ್‌ಡಿಎಂಸಿ ಪ್ರಯತ್ನಕ್ಕೆ ಶ್ಲಾಘನೆ!

ಪಂದ್ಯಾಟ ವ್ಯವಸ್ಥೆಯ ಕೀರ್ತಿ ಉಳ್ಳಾಲ ಉರ್ದು ಪ್ರೌಢಶಾಲಾ ಪಾಲಾಯಿತು. ಪಂದ್ಯಾಟದ ಜವಾಬ್ದಾರಿ ವಹಿಸಿದ್ದ ಉರ್ದು ಶಾಲಾಭಿವೃದ್ಧಿ ಸಮಿತಿ ವ್ಯವಸ್ಥೆಗಳಿಗೆ ತಂಡವಾಗಿ ಕೆಲಸ ಮಾಡಿತು. ಶಾಲೆಗೆ ಮೈದಾನ ಇಲ್ಲದ ಕಾರಣ ನಗರಸಭೆ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಉಳ್ಳಾಲ ಭಾಗದಲ್ಲಿ ಸರ್ಕಾರಿ ಮಟ್ಟದ ಶಾಲಾ ಕಾರ್ಯಕ್ರಮ ಯಶಸ್ಸು ಕಾಣುತ್ತಾ ಬಂದಿದೆ. ಆದರೆ ಕಬಡ್ಡಿ ಪಂದ್ಯಾಟ ಎಲ್ಲವನ್ನೂ ಮೀರಿಸಿದ ಕೀರ್ತಿಗೆ ಪಾತ್ರವಾಯಿತು. ಈಯಶಸ್ಸಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಶ್ಲಾಘನೀಯ.

ಪ್ರಥಮ ಬಾರಿ ಮ್ಯಾಟ್ ಬಳಕೆ!

ಶಾಲಾ ಮಟ್ಟದ ಪಂದ್ಯಾಟದಲ್ಲಿ ಮ್ಯಾಟ್ ಬಳಕೆ ಇರಲಿ, ಕೆಲವು ಕಡೆ ಅಂಗಳ ಕಳಪೆಯಾಗಿರುತ್ತದೆ.

ಉಳ್ಳಾಲದಲ್ಲಿ ನಡೆದ ವಲಯ ಮಟ್ಟದ ಪ್ರೌಢಶಾಲಾ ಬಾಲಕ, ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಅಂಗಳಕ್ಕೆ ಮ್ಯಾಟ್ ಬಳಸಿರುವುದು ಉಳ್ಳಾಲ ಭಾಗದಲ್ಲಿ ಪ್ರಥಮ ಎನಿಸಿತು. ಪಂದ್ಯಾಟದಲ್ಲಿ ಐದು ಬಾಲಕಿಯರ, 14 ಬಾಲಕರ ತಂಡಗಳು ಭಾಗವಹಿಸಿದ್ದವು. ಚೆಂಡೆ, ವಾದ್ಯದ ಮೂಲಕ ಅತಿಥಿಗಳನ್ನು ಸ್ವಾಗತಿಸಿ ಕ್ರೀಡಾಪಟುಗಳಲ್ಲಿ ಹುಮ್ಮಸ್ಸು ತುಂಬಲಾಯಿತು. ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇದ್ದಲ್ಲಿ ಸರ್ಕಾರಿ ಮಟ್ಟದ ಕಾರ್ಯಕ್ರಮದಲ್ಲಿ ಇಂತಹ ವ್ಯವಸ್ಥೆ ಮಾಡಲು ಸಾಧ್ಯ ಎನ್ನುವುದಕ್ಕೆ ಪಂದ್ಯಾಟದ ವ್ಯವಸ್ಥೆ ಸಾಬೀತುಪಡಿಸಿತು.

ವಲಯ ಮಟ್ಟದ ಕಬಡ್ಡಿ ಪಂದ್ಯಾಟ ಆಯೋಜಿಸುವ ಜವಾಬ್ದಾರಿ ಶಿಕ್ಷಣ ಇಲಾಖೆ ನೀಡಿದ್ದನ್ನು ಸಂತೋಷದಿಂದ ಸ್ವೀಕರಿಸಿ ಮಾದರಿಯಾಗುವ ನಿಟ್ಟಿನಲ್ಲಿ ಪ್ರತ್ಯೇಕ ಸಮಿತಿ ರಚಿಸಿ ತಂಡವಾಗಿ ಕಾರ್ಯಾಚರಿಸಿ ಯಶಸ್ವಿಯಾಗಿ ನಡೆಸಿದ ತೃಪ್ತಿ ಇದೆ. - ಮುಸ್ತಫಾ ಅಬ್ದುಲ್ಲಾ ಕಾರ್ಯಾಧ್ಯಕ್ಷ, ಶಾಲಾಭಿವೃದ್ಧಿ ಸಮಿತಿ ಇದಕ್ಕಿಂತ ಮೊದಲು ಕೂಡ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿದ್ದೇವೆ. ಆದರೆ ಪ್ರಥಮ ಬಾರಿಗೆ ಮ್ಯಾಟ್‌ನಲ್ಲಿ ನಡೆದ ಪಂದ್ಯದಲ್ಲಿ ಭಾಗವಹಿಸಿದ್ದು ವಿಶೇಷ ಅನುಭವ ನೀಡಿದೆ. - ವಿಶ್ಮಾ ಗ್ಲೆವಿಟಾ ಡಿಸೋಜ ಆಟಗಾರ್ತಿ, ನಿತ್ಯಾಧರ್ ಆಂಗ್ಲ ಮಾಧ್ಯಮ ಶಾಲೆ ನಮ್ಮ ಶಾಲೆ ಆಶ್ರಯದಲ್ಲೇ ಪಂದ್ಯಾಟ ಅಯೋಜಿಸಿದ್ದು ಶಾಲಾ ತಂಡ ಪ್ರಥಮ ಬಾರಿಗೆ ಪಂದ್ಯಾಟದಲ್ಲಿ ಭಾಗವಹಿಸಿದೆ. ಆರಂಭದಲ್ಲೇ ಮ್ಯಾಟ್‌ನಲ್ಲಿ ಆಡಿರುವುದು ಅತ್ಯಂತ ಖುಷಿ ಕೊಟ್ಟಿದೆ. - ಶಾಝಿನ್ ಆಟಗಾರ, ಮೇಲಂಗಡಿ ಸರ್ಕಾರಿ ಉರ್ದು ಪ್ರೌಢಶಾಲೆ https://www.vijayavani.net/ranjith-selected-for-gurushrestha-award https://www.vijayavani.net/traffic-ban-problem