ಜಿಲ್ಲೆ

ಪ್ರೌಢಶಾಲೆ ಶಿಕ್ಷಣ ವಿದ್ಯಾರ್ಥಿಯ ಜೀವನಕ್ಕೆ ದಾರಿ ದೀಪ

Mysuru - Desk - Naveen Kumar H P

ಮಂಡ್ಯ : ಪ್ರೌಢಶಾಲಾ ಮಟ್ಟದ ಶಿಕ್ಷಣ ವಿದ್ಯಾರ್ಥಿಗಳು ಮುಂದಿನ ಜೀವನ ರೂಪಿಸಿಕೊಳ್ಳಲು ದಾರಿದೀಪವಾಗಲಿದೆ ಎಂದು ಜೆ.ಜೆ. ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಲಲಿತಾಂಬ ಸೋಮಶೇಖರ್ ಅಭಿಪ್ರಾಯಪಟ್ಟರು.


2023-24 ನೇ ಸಾಲಿನಲ್ಲಿ ಚನ್ನಪಟ್ಟಣ ರಸ್ತೆಯಲ್ಲಿರುವ ಜೆ.ಜೆ.ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 11 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಈ ಬಾರಿಯ ಪರೀಕ್ಷೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿನಿ ಎಚ್.ಎನ್.ರೇಷ್ಮಾ 615 ಅಂಕ ಪಡೆದು ಮಳವಳ್ಳಿ ತಾಲೂಕಿನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಲ್ಲದೆ ನಮ್ಮ ಶಾಲೆಗೆ ಕೀರ್ತಿ ತಂದಿರುವುದು ನಮಗೆ ಸಂತಸದ ತಂದಿದೆ. ನಮ್ಮ ಶಾಲೆಗೆ ನೂರಕ್ಕೆ ನೂರು ಫಲಿತಾಂಶ ಬಂದಿದ್ದು, 11 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಯಾಗಿದ್ದಾರೆ ಎಂದರು.


ಶಾಲೆಗೆ ಶೇ.100 ಫಲಿತಾಂಶ ತರುವುದು ಅಷ್ಟು ಸುಲಭವಲ್ಲ. ಸಾಧನೆಯಲ್ಲಿ ಇಲ್ಲಿಯ ಶಿಕ್ಷಕರ ಪಾತ್ರ ಕೂಡ ಇದೆ. ತಮ್ಮ ಹೆತ್ತ ಮಕ್ಕಳಿಗಿಂತ ಹೆಚ್ಚಿನ ಕಾಳಜಿ ವಹಿಸಿ ಈ ಶಾಲೆಯ ಮಕ್ಕಳಿಗೆ ಉತ್ತೇಜನ ನೀಡಿದ್ದಾರೆ. ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಲು ಅನುಕೂಲವಾಗುವಂತೆ ಪ್ರೌಢಶಾಲಾ ಮಟ್ಟದ ಶಿಕ್ಷಣ ದಾರಿದೀಪವಾಗಲಿದೆ. ನೀವು ಮುಂದೆ ಏನಾದರೂ ಸಾಧನೆ ಮಾಡುತ್ತೇವೆ ಎಂಬ ಆತ್ಮಸ್ಥೈರ್ಯ ಈ ಮಟ್ಟದಲ್ಲಿ ದೊರೆಯುತ್ತದೆ ಎಂದರು.
ನಮ್ಮ ಶಾಲೆಯ ಶಿಕ್ಷಕರು ಮಕ್ಕಳ ಮುಂದಿನ ಭವಿಷ್ಯಕ್ಕೆ ಉತ್ತಮವಾದ ಬುನಾದಿಯನ್ನು ಹಾಕಿ ಕೊಟ್ಟಿದ್ದಾರೆ. ಮಕ್ಕಳು ತಮ್ಮ ಮುಂದಿನ ವಿದ್ಯಾಭ್ಯಾಸದಲ್ಲಿ ಮನಸ್ಸನ್ನು ಕೇಂದ್ರೀಕರಿಸಿ. ಬೇರೆ ಕಡೆ ಗಮನ ಕೊಡಬೇಡಿ. ನಿಮ್ಮ ಇಷ್ಟು ವರ್ಷದ ಕಷ್ಟವನ್ನು ಸಫಲಗೊಳಿಸಿಕೊಳ್ಳಲು ಯೋಚಿಸಿ. ಉತ್ತಮವಾದ ಹೆಜ್ಜೆ ಇರಿಸಿ, ನಿಮ್ಮ ಮುಂದಿನ ಭವಿಷ್ಯ , ನಿಮ್ಮ ಮುಂದಿನ ವ್ಯಾಸಂಗದ ಜೀವನ ಉಜ್ವಲ ವಾಗಿರಲಿ ಎಂದು ಶುಭ ಹಾರೈಸಿದರು.


ವಿದ್ಯಾರ್ಥಿನಿ ರೇಷ್ಮಾ ಮಾತನಾಡಿ, ನಾನು ದ್ವಿತೀಯ ಸ್ಥಾನ ಪಡೆಯಲು ನಮ್ಮ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ಪರಿಶ್ರಮ ಹೆಚ್ಚಿದೆ. ಶಾಲೆಯಲ್ಲಿ ರಾತ್ರಿ ತರಗತಿ ನಡೆಸಲಾಗುತಿತ್ತು. ಯಾವುದೇ ಸಮಯವಾಗಲಿ ನಮ್ಮ ಶಿಕ್ಷಕರಿಗೆ ಕರೆ ಮಾಡಿದಾಗ ಬೇಸರಿಸದೆ ನನಗೆ ಗೊತ್ತಿಲ್ಲದ ವಿಷಯವನ್ನು ಅರ್ಥವಾಗುವಂತೆ ತಿಳಿಸುತ್ತಿದ್ದರು. ಆದುದರಿಂದ ನನಗೆ ಉತ್ತಮ ಅಂಕ ಬರಲು ಕಾರಣವಾಯಿತು ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುವ ಎಚ್.ಎನ್.ರೇಷ್ಮಾ 615, ಭೂಮಿಕಾ 606, ವಿಸ್ಮಯ 599, ವರ್ಷ 592, ಲಾಸ್ಯಾ 592, ಭಾನುಪ್ರಿಯಾ 573, ಮೊಹಮ್ಮದ್ ಹನೀಫ್ 565, ಪೂಜಾ 557, ನಿಸರ್ಗಾ 549, ಬಿಂದಿಯಾ ಸೋನಿ 543, ಪವನ್ ಕುಮಾರ್ 541 ಅವರನ್ನು ಶಾಲೆಯ ಸಂಸ್ಥಾಪಕರಾದ ಸೋಮಶೇಖರ್ ಹಾಗೂ ಶಿಕ್ಷಕರು ಸನ್ಮಾನಿಸಿದರು.