ಜಿಲ್ಲೆ

ವಿಶ್ರ ಬೆಳೆ ಪದ್ದತಿಯಿಂದ ಅಧಿಕ ಲಾಭ

ಕಡೂರು: ಲವತ್ತತೆಯ ಮಣ್ಣಿನಲ್ಲಿ ಕೃಷಿ ಬದುಕಿನ ನಡುವೆಯೂ ರೈತರು ಸಮಗ್ರ ತೋಟಗಾರಿಕೆ ಬೆಳೆಗಳನ್ನು ಅಳವಡಿಸಿಕೊಂಡರೆ ಆರ್ಥಿಕತೆ ಪುನಶ್ಚೇತನಗೊಳಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಚ್.ಕೆ.ಜಯದೇವಪ್ಪ ತಿಳಿಸಿದರು.
ಗುರುವಾರ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ರೈತರಿಗೆ ಹಲಸು ಬೆಳೆ ಕುರಿತು ನಡೆದ ಸಂವಾದ ಮಾಹಿತಿ ಕಾರ್ಯಗಾರದಲ್ಲಿ ತೋಟಗಾರಿಕೆ ಬೆಳೆಗಳ ಪದ್ದತಿಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದ ಅವರು, ಒಂದೇ ರೀತಿಯ ತೋಟಗಾರಿಕೆ ಬೆಳೆ ಬದಲು ವಿವಿಧ ಬೆಳೆಗಳನ್ನು ಅಳವಡಿಸಿದರೆ ಆರ್ಥಿಕ ಸಬಲತೆ ಪಡೆಯಬಹುದು. ತಾಲೂಕಿನಲ್ಲಿ ಮಣ್ಣು ಅತ್ಯುತ್ಕೃಷ್ಟವಾಗಿದೆ. ಏಲಕ್ಕಿ, ಲವಂಗ, ಸೇಬು ಸೇರಿದಂತೆ ಹಲವಾರು ಬಗೆಯ ತೋಟಗಾರಿಕಾ ಬೆಳೆಗಳನ್ನು ಬೆಳೆಯಬಹುದಾಗಿದೆ. ಆದರೆ ಬೆಳೆಗಳ ಬಗ್ಗೆ ಸಮರ್ಪಕ ಮಾಹಿತಿ ತಿಳಿದುಕೊಳ್ಳುವುದು ಬಹುಮುಖ್ಯ ಎಂದರು.
ರೈತರು ತಮ್ಮ ಜಮೀನನಲ್ಲಿ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಬೆಳೆದರೆ ವೈಲ್ಯದ ಅವಕಾಶ ಬಹು ಕಡಿಮೆಯಾಗಿರುತ್ತದೆ. ಹಲಸು ಬೆಳೆಯುವ ಬಗ್ಗೆ ಮೊದಲು ಸಂಪೂರ್ಣ ಮಾಹಿತಿ ಪಡೆದು, ಸಾಧಕ ಬಾಧಕಗಳ ಬಗ್ಗೆ ಯೋಚನೆ ಮಾಡಿ ವೈಜ್ಞಾನಿಕವಾಗಿ ಬೆಳೆದರೆ ಯಶಸ್ಸು ಸಾಧ್ಯ ಎಂದು ತಿಳಿಸಿದರು.
ಸಾಂಪ್ರದಾಯಿಕವಾಗಿ ಹಲಸು ಬೆಳೆದರೆ ಅದರಲ್ಲಿ ಆದಾಯ ಪಡೆಯುವ ಅವಧಿ ದೀರ್ಘವಾಗಿರುತ್ತದೆ. ಆದರೆ ಸುಧಾರಿತ ತಳಿಗಳಿಂದ ಕೇವಲ ಎರಡೂವರೆ- ಮೂರು ವರ್ಷಗಳಲ್ಲಿ ಆದಾಯ ಪಡೆಯಲು ಆರಂಭಿಸಬಹುದಾಗಿದೆ. ಒಂದು ಎಕರೆ ಪ್ರದೇಶದಲ್ಲಿ 300 ಹೈಬ್ರಿಡ್ ಹಲಸು ಗಿಡಗಳನ್ನು ಹಾಕಬಹುದು. ಈ ತಳಿಯಲ್ಲಿ ಬಿಡುವ ಹಲಸಿನ ಹಣ್ಣನ್ನು ಕೇವಲ ತಿನ್ನುವುದಕ್ಕೆ ಮಾತ್ರವಲ್ಲದೇ ಅದರ ಮೌಲ್ಯವಧಿವತ ಉತ್ಪನ್ನಗಳನ್ನು ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯಬಹುದಾಗಿದೆ ಎಂದರು.
ಸಂಸ್ಥೆ ವ್ಯವಸ್ಥಾಪಕ ಬಿ.ಎಸ್. ನಟರಾಜ್, ರೈತರಾದ ಉದಯ್, ಸ್ವಾಮಿ, ಉಮೇಶ್ ಮತ್ತಿತರಿದ್ದರು.