ಕೆ.ಎಂ.ದೊಡ್ಡಿ: ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ಮದ್ದೂರು ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇನೆ ಎಂದು ಶಾಸಕ ಕದಲೂರು ಉದಯ್ ಭರವಸೆ ನೀಡಿದರು.
ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮಗಳಲ್ಲಿನ ಮೂಲ ಸೌಕರ್ಯ ಸಮಸ್ಯೆಯನ್ನು ಗುರುತಿಸಿ ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮಗಳ ಪರಿಮಿತಿ ವ್ಯಾಪ್ತಿಗೆ ಬರುವ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ನೀಲಿ ನಕ್ಷೆ ತಯಾರಿಸಿ ಅದರಂತೆ ಅಭಿವೃದ್ಧಿ ಕಾರ್ಯಕ್ಕೆ ಆದ್ಯತೆ ನೀಡಲಾಗುವುದು. ಪ್ರತಿ ಗ್ರಾಮ ಸಹ ಮಾದರಿಯಾಗಬೇಕು ಎಂಬುದು ನನ್ನ ಉದ್ದೇಶವಾಗಿದೆ ಎಂದರು.
ಯಾವುದೇ ಅಭಿವೃದ್ಧಿ ಕಾಮಗಾರಿಗಳಲ್ಲೂ ಸಹ ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ಕಾಮಗಾರಿಗಳನ್ನು ಅವರಿಗೆ ಯಾವುದೇ ಕಾರಣಕ್ಕೂ ನೀಡುವುದಿಲ್ಲ. ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಸೂಚಿಸಿದರು.
ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಜಿ.ಪಂ. ಮಾಜಿ ಸದಸ್ಯ ಎ.ಎಸ್. ರಾಜೀವ್, ನಿವೃತ್ತ ಉಪ ತಹಸೀಲ್ದಾರ್ ಸಿದ್ದೇಗೌಡ, ಡೈರಿ ಅಧ್ಯಕ್ಷ ಸುನೀಲ್, ಸೊಸೈಟಿ ನಿರ್ದೇಶಕ ನಂಜುಂಡೇಗೌಡ, ಸಿದ್ದರಾಮೇಗೌಡ, ಮುಖಂಡರಾದ ರುದ್ರಯ್ಯ, ಸಿದ್ದೇಗೌಡ, ಚಿಕ್ಕಮರೀಗೌಡ, ರಘುಬೋರೇಗೌಡ, ಗಿರೀಶ್, ಮಂಜು, ಕರಡಕೆರೆ ಮನು, ಬಸವರಾಜು ಸೇರಿದಂತೆ ಮತ್ತಿತರಿದ್ದರು.