ಬೀಳಗಿ: ಮತಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ನೀರಾವರಿ ಶಿಕ್ಷಣ, ಆರೋಗ್ಯ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದೆಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.
ತಾಲೂಕಿನ ಬಿಸನಾಳದಲ್ಲಿ ಸೋಮವಾರ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮತಕ್ಷೇತ್ರದ ವಿವಿಧ ಗ್ರಾಮಗಳ ರಸ್ತೆಗಳ ಅಭಿವೃದ್ಧಿಗೆ ಸರ್ಕಾರದಿಂದ 25 ಕೋಟಿ ರೂ. ದೊರೆತಿದೆ. ಇದರಲ್ಲಿ ರೈತರು, ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈಗಾಗಲೇ ಚಿಕ್ಕಾಲಗುಂಡಿ ಎಸ್.ಎಚ್. ರಸ್ತೆ, ಕಾತರಕಿ, ಅರಕೇರಿ, ಜಾನಮಟ್ಟಿ, ಸುನಗ ಮತ್ತಿತರ ಭಾಗಗಳಲ್ಲಿನ ರಸ್ತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ತಾಲೂಕಿನ ಅರಕೇರಿ ಗ್ರಾಮದ ಕೆರೆಗೆ ನೀರು ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ತಾಲೂಕಿನ ಯಡಹಳ್ಳಿಯ ಚಿಂಕಾರ ವನ್ಯ ಜೀವಿಧಾಮದಲ್ಲಿ ಚಿಂಕಾರಾ ಜಿಂಕೆಗಳ ಸಂತತಿಯೂ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತಿದ್ದು, ಇದರಿಂದ ಅರಣ್ಯ ಪ್ರದೇಶ ಸುಂದರವಾಗಿ ಕಾಣಲಿದೆ. ಮತಕ್ಷೇತ್ರದ ಮೇಲಿನ ಹುಲ್ಲಿಕೇರಿ, ಹಲಕುರ್ಕಿ, ಯಡಹಳ್ಳಿ ಕೆರೆಗಳ ಅಭಿವೃದ್ಧಿಗೆ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು
ಗ್ರಾಮದ ಹಿರಿಯ ಮುಖಂಡರಾದ ದ್ಯಾಮಣ್ಣ ದುಂಡಪ್ಪ ಕಂಬಾರ, ಶಿವಾನಂದ ಮಾದರ ಬಿಸನಾಳ, ತಾಪಂ ಮಾಜಿ ಉಪಾಧ್ಯಕ್ಷೆ ರೇಖಾ ಕಟ್ಟೆಪ್ಪನವರ, ಶ್ರೀಶೈಲ ಜೋಗೆನ್ನವರ, ವಿಠ್ಠಲ ಕಂಬಾರ, ಹನುಮಂತ ಕಟ್ಟೆಪ್ಪನವರ, ರುದ್ರಪ್ಪ ಕಡಪಟ್ಟಿ, ನಾಗೇಶ ಭಗವಂತಪ್ಪ ಕೂಗಟಿ, ಕುತುಬುಸಾಬ ಅಲ್ಲಾಡಿ ಇದ್ದರು.