ಜಿಲ್ಲೆ

ಗಡಿ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ

ಜಿ.ಹೆಚ್. ಧನ್ಯಕುಮಾರ್

ಪಂಚನಹಳ್ಳಿ: ಗಡಿ ಗ್ರಾಮಗಳು ನಿರ್ಲಕ್ಷಕ್ಕೆ ಒಳಗಾಗಬಾರದು ಎಂದು ಗಡಿ ಗ್ರಾಮಗಳಿಗೆ ಹೆಚ್ಚಿನ ಅನುದಾನ ನೀಡಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ತಾಲೂಕಿನ ಉಪ್ಪನಹಳ್ಳಿ ಗ್ರಾಮದಲ್ಲಿ 75 ಲಕ್ಷ ರೂ. ವೆಚ್ಚದ ಕಾಂಕ್ರಿಟ್ ರಸ್ತೆ ಉದ್ಘಾಟಿಸಿ ಮಾತನಾಡಿ, ಸರ್ಕಾರದ ಬರುವ 10 ಕೋಟಿ ಶಾಸಕರ ಅನುದಾನದಲ್ಲಿ ಕ್ಷೇತ್ರದ ಪ್ರತಿ ಗ್ರಾಮಕ್ಕೂ ಅನುದಾನ ನೀಡಬೇಕು. ಒಂದೇ ಗ್ರಾಮಕ್ಕೆ 75 ಲಕ್ಷ ಅನುದಾನ ನೀಡುವುದು ಕಷ್ಟದ ಕೆಲಸ. ಆದರೂ ಉಪ್ಪನಹಳ್ಳಿ ಗ್ರಾಮಕ್ಕೆ 75 ಲಕ್ಷ ರೂ.ಅನುದಾನ ನೀಡಲಾಗಿದೆ ಎಂದರು.

ಚುನಾವಣೆ ವೇಳೆ ಪ್ರಚಾರಕ್ಕೆ ಬಂದಾಗ ಉಪ್ಪನಹಳ್ಳಿ ತಾಂಡ್ಯ ರಸ್ತೆ ಸಂಪೂರ್ಣ ಹಾಳಾಗಿರುವುದನ್ನು ಗಮನಿಸಿದ್ದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ರಸ್ತೆ ಅಭಿವೃದ್ಧಿಗೆ ಹಣ ನೀಡುವ ಭರವಸೆ ನೀಡಲಾಗಿತ್ತು. ಅದರಂತೆ ಅನುದಾನ ನೀಡಿ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಗ್ರಾಮದ ಆಂಜನೇಯ ಸ್ವಾಮಿ ದೇವಾಲಯ ಜೀರ್ಣೋದ್ಧಾರಕ್ಕೂ ಸಾಧ್ಯವಾದಷ್ಟು ಅನುದಾನ ನೀಡಲಾಗುವುದು ಎಂದರು. ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಿ.ಸಿ.ಪ್ರಸನ್ನ ಮಾತನಾಡಿ,ಉಪ್ಪನಹಳ್ಳಿಯಿಂದ ತಾಂಡ್ಯಕ್ಕೆ ತೆರಳುವ ರಸ್ತೆ ಮತ್ತು ಗ್ರಾಮದೊಳಗಿನ ರಸ್ತೆಯ ಅಭಿವೃದ್ಧಿ ಇಲ್ಲಿನ ಜನರ ಬಹು ದಿನದ ಬೇಡಿಕೆಯಾಗಿತ್ತು. ಇದೀಗ ನೆರವೇರಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಷಣ್ಮುಖ ಭೋವಿ, ನಿಡುವಳ್ಳಿ ಗ್ರಾಪಂ ಅಧ್ಯಕ್ಷ ಉಮಾಶಂಕರ್, ಸದಸ್ಯರಾದ ನೇತ್ರಾವತಿ, ಲಕ್ಷ್ಮೀಶ ಮುಖಂಡರಾದ ಕೋಡಿಹಳ್ಳಿ ಶ್ರೀನಿವಾಸ್, ತಮ್ಮಯ್ಯ, ಮಹಾಲಿಂಗಪ್ಪ ಮತ್ತಿತರರು ಇದ್ದರು.