ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳು ಕಠಿಣ ಪರಿಶ್ರಮದೊಂದಿಗೆ ಅಭ್ಯಾಸ ಮಾಡಿದಲ್ಲಿ ಉನ್ನತ ಹುದ್ದೆ ಅಲಂಕರಿಸಬಹುದು ಎಂದು ಹು-ಧಾ ವಲಯ ಕಚೇರಿ ಸಹಾಯಕ ಆಯುಕ್ತ ಶಂಕರ ಪಾಟೀಲ ಹೇಳಿದರು.
ನಗರದ ಬಾಸೆಲ್ ಮಿಷನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಪಾಲಕರ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಾಲೆ-ಕಾಲೇಜು ಅವಧಿಯಲ್ಲಿ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಅಭ್ಯಾಸದತ್ತ ಗಮನ ಹರಿಸಬೇಕು. ಶಿಕ್ಷಕರಿಗೆ, ತಂದೆ, ತಾಯಿಗೆ ಗೌರವ ನೀಡಬೇಕು. ಒಳ್ಳೆ ಪ್ರಜೆಗಳಾಗಿ ಜೀವನ ಸಾಗಿಸಬೇಕು ಎಂದರು.
ಎಸ್.ಡಿ. ಬೇಲಿ, ವಿಲ್ಸನ್ ಮೈಲಿ ಮಾತನಾಡಿ, ಮಗುವಿನ ಶಿಕ್ಷಣಕ್ಕೆ ಶಾಲೆ ಜತೆಗೆ ಪಾಲಕರ ಸಹಕಾರವೂ ಅಗತ್ಯವಾಗಿದೆ. ಮಕ್ಕಳ ಚಟುವಟಿಕೆಗಳ ಮೇಲೆ ಸದಾ ಗಮನವಿಡಬೇಕು ಎಂದರು.
ರೆ. ಸ್ಯಾಮುವೆಲ್ ಕೆಲ್ವಿನ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸುಧಾರಾಣೆ ಸಮಿತಿ ಸದಸ್ಯ ಪುನೀತ, ಜೈಚಂದ್ರ, ಶೈಲೇಶ, ಪಾಲಕರು, ಶಿಕ್ಷಕರು, ಇತರರು ಇದ್ದರು. ಮುಖ್ಯಾಧ್ಯಾಪಕ ಜಾಯ್ ಪ್ರಕಾಶ ವರದಿ ವಾಚಿಸಿದರು.