ಜಿಲ್ಲೆ

ರೋಣದ ಸೂಡಿ ವೃತ್ತದಲ್ಲಿ ಉರುಳಿದ ಹೈಮಾಸ್ಟ್ ದೀಪದ ಕಂಬ

ರವಿ ಎಸ್. ಬಳೂಟಗಿ

ರೋಣ: ಪಟ್ಟಣದ ಸೂಡಿ ವೃತ್ತದಲ್ಲಿ ಹಾಕಲಾಗಿದ್ದ ಹೈಮಾಸ್ಟ್ ವಿದ್ಯುತ್ ಕಂಬ ಶಿಥಿಲಗೊಂಡು ಗುರುವಾರ ಬೀಸಿದ ಗಾಳಿಗೆ ಬೈಕ್ ಸವಾರನ ಮೇಲೆ ಉರುಳಿ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಭಾರಿ ಅಪಾಯದಿಂದ ಪಾರಾಗಿದ್ದಾನೆ.

ಪಟ್ಟಣದ ಮುಖ್ಯ ರಸ್ತೆಯಾಗಿರುವ ಸೂಡಿ ವೃತ್ತದಲ್ಲಿ ಕಳೆದ ಕೆಲ ವರ್ಷಗಳ ಹಿಂದೆ ಹೈಮಾಸ್ಟ್ ವಿದ್ಯುತ್ ದೀಪ ಹಾಕಲಾಗಿತ್ತು. ಈ ದೀಪವು ಹಲವು ದಿನಗಳಿಂದ ಬಂದ್ ಆಗಿದ್ದು, ತುಕ್ಕು ಹಿಡಿದಿದ್ದು ಬೀಳುವ ಹಂತವನ್ನು ತಲುಪಿತ್ತು. ಹೈಮಾಸ್ಟ್ ದೀಪದ ಪಕ್ಕದಲ್ಲಿಯೇ ಅಂಗಡಿಗಳು ಹಾಗೂ ವಿದ್ಯುತ್ ತಂತಿಗಳು ಹಾದುಹೋಗಿದ್ದವು. ಗುರುವಾರ ಬೀಸಿದ ಗಾಳಿಗೆ ಸೂಡಿ ಕ್ರಾಸ್‌ನಲ್ಲಿ ಸಂಚರಿಸುತ್ತಿದ್ದ ವಾಹನ ಸವಾರ ಕಿರಣ ಚನ್ನವೀರಶೆಟ್ಟರ ಎಂಬುವರ ಮೇಲೆ ಬಿದ್ದಿದ್ದು, ಅವರ ಕೈಕಾಲುಗಳಿಗೆ ಪೆಟ್ಟು ಬಿದ್ದಿದೆ. ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಸ್ತೆಗೆ ಉರುಳಿ ಬೀಳುವ ಬದಲಿಗೆ ಅಂಗಡಿಗಳ ಮೇಲೆ ಬಿದ್ದಿದ್ದರೆ ಇನ್ನೂ ಹೆಚ್ಚಿನ ಹಾನಿ ಸಂಭವಿಸುವ ಸಾಧ್ಯತೆ ಇತ್ತು. ರಸ್ತೆಗೆ ಬಿದ್ದ ದೀಪವನ್ನು ಕೂಡಲೇ ಸಾರ್ವಜನಿಕರು ಎತ್ತಿ ಪಕ್ಕಕ್ಕೆ ಸರಿಸಿದ್ದಾರೆ. ಇಷ್ಟಾದರೂ ಪುರಸಭೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.