ಕೆ.ಎಂ.ದೊಡ್ಡಿ: ಎರೆಹುಳು ಘಟಕದಿಂದ ತಯಾರಾದ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆಯಿದ್ದು, ರಾಸಾಯನಿಕ ಗೊಬ್ಬರಗಳಿಂತಲೂ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ ಹಾಗೂ ಹೆಚ್ಚಿನ ಇಳುವರಿಯನ್ನು ನೀಡುತ್ತದೆ ಎಂದು ಬೆಂಗಳೂರು ಬಸವನಗುಡಿ ರೋಟರಿ ಘಟಕದ ಅಧ್ಯಕ್ಷ ವಿಜಯ್ ರಾಜ್ ತಿಳಿಸಿದರು.
ಸಮೀಪದ ಅಣ್ಣೂರು ಗ್ರಾಮದ ಶಾಂತಮ್ಮ ಶಿವರಾಜು ಅವರ ಮನೆಯ ಪಕ್ಕದ ಆವರಣದಲ್ಲಿ ಬೆಂಗಳೂರಿನ ಬಸವನಗುಡಿ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಬೆಂಗಳೂರಿನ ಉದ್ಯಮಿ ಮಣಿಕಂಠ ಅವರ ಸಹಾಯಹಸ್ತದೊಂದಿಗೆ ನಿರ್ಮಿಸಿರುವ ಎರೆಹುಳು ಗೊಬ್ಬರ ತಯಾರಿಕ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತ ಮಿತ್ರ ಎರೆಹುಳು ಗೊಬ್ಬರ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತದೆ. ಈ ನಿಟ್ಟಿನಲ್ಲಿ ರೈತರಿಗೆ ಅನುಕೂಲಕರವಾಗಿರುವ ಈ ವಿಧಾನದಲ್ಲಿ ಕೃಷಿ ಪದ್ಧತಿಯನ್ನು ಅನುಸರಿಸಬೇಕು ಎಂದು ಅರಿವು ಮೂಡಿಸಿದರು.
ಗ್ರಾಮೀಣ ಭಾಗದ ಕೃಷಿಗೆ ಹಾಗೂ ರೈತರಿಗೆ ಅನುಕೂಲವಾಗುವಂತೆ ಅಣ್ಣೂರು ಗ್ರಾಮದಲ್ಲಿ ಐದು ಕಡೆ ಎರೆಹುಳು ಘಟಕವನ್ನು ನಿರ್ಮಾಣ ಮಾಡುತ್ತಿದ್ದು, ಬೆಂಗಳೂರಿನ ಕೃಷಿ ಮಹಾವಿದ್ಯಾಲಯ ಪ್ರಾಧ್ಯಾಪಕರ ಸಲಹೆಯ ಮೇರೆಗೆ ರೈತರ ಕೃಷಿಗೆ ಅನುಕೂಲವಾಗುವಂತೆ ಜೈವಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಸಾವಯವ ಗೊಬ್ಬರಗಳ ಬಳಕೆಗೆ ಅನುಗುಣವಾಗಿ ಕೃಷಿ ಚಟುವಟಿಕೆಗಳನ್ನು ಅನುಸರಿಸಲು ಸಹಕಾರಿಯಾಗಲು ಎರೆಹುಳು ಘಟಕಗಳು ಅತಿಹೆಚ್ಚು ಅನುಕೂಲವಾಗುತ್ತವೆ ಎಂದರು.
ನರ್ಸರಿ ಬೆಳೆಗಳಿಗೆ ಸಾವಯವ ಕೃಷಿಗೆ ಹೆಚ್ಚು ಅನುಕೂಲವಾಗುವ ಹಾಗೂ ಭೂಮಿಗೆ ಹೆಚ್ಚು ಫಲವತ್ತತೆಯನ್ನು ತರುವ ಅಂಶಗಳು ಈ ಘಟಕದಲ್ಲಿ ಇರುತ್ತದೆ. ಘಟಕದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರಿನಿಂದ ನೈಸರ್ಗಿಕ ಗೊಬ್ಬರವಾಗಿ ಬೆಳೆಗಳಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಗ್ರಾ.ಪಂ. ಅಧ್ಯಕ್ಷೆ ಅಶ್ವಿನಿ ಆನಂದ್, ರೋಟರಿ ಸಂಸ್ಥೆಯ ಜಿಲ್ಲಾ ಮಹಿಳಾ ಸಬಲೀಕರಣದ ನಿರ್ದೇಶಕಿ ಡಾ.ಅನುಪಮಾ ಸವದಿ, ಮಾಜಿ ಅಧ್ಯಕ್ಷರಾದ ಆಶಾ ರಾಜೇಶ್, ಕವಿತಾ ಸುಂದರರಾಜ್, ಪಿಡಿ ಅಶ್ವಿನಿ, ಸದಸ್ಯರಾದ ಪಿಣ್ಣ ಸತೀಶ್, ಕಾರ್ಕಹಳ್ಳಿ ಮಹೇಶ್, ಚಂದ್ರಶೇಖರ್, ಸಿದ್ದೇಗೌಡ, ಮುಖಂಡರಾದ ಜಯಸ್ವಾಮಿ, ವೀರೇಂದ್ರ, ಗ್ರಾ.ಪಂ ದ್ವಿತಿಯ ದರ್ಜೆ ಸಹಾಯಕ ರಾಮು ಉಪಸ್ಥಿತರಿದ್ದರು.