ಗೋಕರ್ಣ: ಇಲ್ಲಿನ ಪುರಾಣ ಖ್ಯಾತ ಶ್ರೀಮಹಾಬಲೇಶ್ವರ ಮಂದಿರದ ಮೇಲುಸ್ತುವಾರಿ ಸಮಿತಿಗೆ ರಾಜ್ಯ ಸರ್ಕಾರ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಸದಸ್ಯರನ್ನು ಬದಲಿಸಿ ಕಳೆದ ತಿಂಗಳು ಹೊಸದಾಗಿ ಪ್ರಕಟಿಸಿದ್ದ ನಾಮ ನಿರ್ದೇಶನ ಆದೇಶಕ್ಕೆ ರಾಜ್ಯ ಉಚ್ಛ ನ್ಯಾಯಾಲಯ ಸೋಮವಾರ ತಡೆ ಆಜ್ಞೆ ನೀಡಿದೆ.
ನೂತನವಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಸರ್ಕಾರ ಕಳೆದ ಜುಲೈ 12ರಂದು ಸವೋಚ್ಛ ನ್ಯಾಯಾಲಯದ ಆದೇಶದನ್ವಯ 2021ಮೇ 4ರಿಂದ ಮೇಲುಸ್ತುವಾರಿ ಸಮಿತಿಯ ಸದಸ್ಯರಾಗಿ ಅಂದಿನ ರಾಜ್ಯ ಸರ್ಕಾರದಿಂದ ನಿಯುಕ್ತರಾಗಿದ್ದ 4 ಸದಸ್ಯರ ಜಾಗಕ್ಕೆ ಹೊಸದಾಗಿ ಬೇರೆ ನಾಲ್ವರನ್ನು ನಾಮನಿರ್ದೇಶನ ಮಾಡಿತ್ತು.
ಸರ್ಕಾರದ ಈ ಹೊಸ ಆದೇಶವನ್ನು ಈ ಮೊದಲು ಮಂದಿರದ ಆಡಳಿತ ನಿರ್ವಹಣೆ ಕೈಗೊಂಡಿದ್ದ ರಾಮಚಂದ್ರಾಪುರ ಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ ಹೆಗಡೆ ಪ್ರಶ್ನಿಸಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ಕೋರಿ ಮೇಲ್ಮನವಿ(ರಿಟ್ ಅರ್ಜಿ) ಸಲ್ಲಿಸಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ ಅವರ ಪೀಠ ನೂತನ ನಾಮನಿರ್ದೇಶಿತ ಸದಸ್ಯರ ನೇಮಕಕ್ಕೆ ಸೋಮವಾರ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಪ್ರಶ್ನಿಸಲ್ಪಟ್ಟ ಸರ್ಕಾರದ ಅಧಿಕಾರ: ವಿಚಾರಣೆ ವೇಳೆ ಸಮಿತಿ ಸದಸ್ಯರ ಬದಲಾವಣೆ ಕುರಿತಾಗಿ ಸರ್ಕಾರಕ್ಕೆ ಇರುವ ಅಧಿಕಾರವನ್ನು ನ್ಯಾಯಪೀಠ ಪ್ರಶ್ನಿಸಿದೆ. ಇದೇ ದೇವಾಲಯಕ್ಕೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇವೆ. ಇದರ ಜತೆಗೆ ಸಮಿತಿಯಲ್ಲಿ 2021ರಿಂದ ಕಾರ್ಯನಿರ್ವಹಣೆಯಲ್ಲಿದ್ದ ಯಾವುದೇ ಸದಸ್ಯ ಅನರ್ಹ ಅಥವಾ ನಿಷ್ಕ್ರಿಯ ಆಗಿಲ್ಲ. ಇಂತಹ ಸನ್ನಿವೇಶದಲ್ಲಿ 4 ಮೇ 2021ರಂದು ಸಮಿತಿ ಸದಸ್ಯರ ನಿಯುಕ್ತಿ ಮಾಡಿ ಅಂದಿನ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕೈಬಿಟ್ಟು ಹೊಸಬರನ್ನು ನಿರ್ದೇಶನ ಮಾಡುವ ಅಧಿಕಾರ ಸರ್ಕಾರಕ್ಕೆ ದತ್ತವಾಗಿಲ್ಲ ಎಂದು ನ್ಯಾಯಮೂರ್ತಿಗಳು ತಮ್ಮ ಮಧ್ಯಂತರ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಸುಪ್ರೀಂ ಆದೇಶ: 19 ಏಪ್ರಿಲ್ 2021ರಂದು ಸವೋಚ್ಛ ನ್ಯಾಯಾಲಯ ಮಂದಿರದ ಆಡಳಿತ ಹಸ್ತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂದಿರದ ಆಡಳಿತ ನಿರ್ವಹಣೆಗೆ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅಧ್ಯಕ್ಷತೆಯಲ್ಲಿ ಮೇಲುಸ್ತುವಾರಿ ಸಮಿತಿಯನ್ನು ರಚಿಸಿ ಆದೇಶಿಸಿತ್ತು. ಇದಕ್ಕೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠರನ್ನು ಸದಸ್ಯರಾಗಿಸಿ ಕುಮಟಾ ಉಪವಿಭಾಗೀಯಾಧಿಕಾರಿಯನ್ನು ಕಾರ್ಯದಶಿಯಾಗಿಸಿತ್ತು. ಇದರ ಸಂಗಡ ಇಬ್ಬರು ಸ್ಥಳೀಯ ಉಪಾಧಿವಂತರು ಮತ್ತು ಇಬ್ಬರು ಪರಿಣಿತರು ಸೇರಿ ಒಟ್ಟು 8 ಸದಸ್ಯರಿಗೆ ಮಂದಿರದ ಮೇಲುಸ್ತುವಾರಿ ಅಧಿಕಾರವನ್ನು ದತ್ತವಾಗಿಸಿತ್ತು.