ಜಿಲ್ಲೆ

ನಕಲಿ ನೋಟಿನ ವಿಚಾರಣೆಗೆ ಹೈ ತಾತ್ಕಾಲಿಕ ತಡೆ

ದಾಂಡೇಲಿ: ಇಲ್ಲಿಯ ಗಾಂಧಿನಗರದ ಮನೆಯೊಂದರಲ್ಲಿ ಸಿಕ್ಕ 12 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಕಲಿ ನೋಟಿನ ಪ್ರಕರಣಕ್ಕೆ ಧಾರವಾಡ ಹೈಕೋರ್ಟ್ ಪೀಠದಲ್ಲಿ ತಾತ್ಕಾಲಿಕ ತಡೆಯಾಜ್ಞೆ ದೊರೆತಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಲಖನೌದಿಂದ ಆರೋಪಿ ಅರ್ಷದ್ ಖಾನ್‌ನನ್ನು ಬಂಧಿಸಿ ಕರೆತಂದಿದ್ದ ದಾಂಡೇಲಿ ಅಪರಾಧ ವಿಭಾಗದ ಪೊಲೀಸ್ ಠಾಣೆಯ ಕಿರಣ್ ಪಾಟೀಲ ನೇತೃತ್ವದ ತಂಡ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಆರಂಭಿಸಿದ್ದರು.

ಆರೋಪಿ ಅರ್ಷದ್ ಖಾನ್ ಜತೆಗೆ ಇನ್ನೂ ಮೂರ್ನಾಲ್ಕು ಜನರು ಇರುವ ಮಾಹಿತಿ ಕೂಡ ಪೊಲೀಸರಿಗೆ ಲಭ್ಯವಾಗಿದೆ ಎಂದು ತಿಳಿದುಬಂದಿದೆ.

ಪ್ರಮುಖ ಆರೋಪಿ ಅರ್ಷದ್ ಖಾನ್‌ನನ್ನು ಪೊಲೀಸರು ಬುಧವಾರ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೇ ಸಂದರ್ಭದಲ್ಲಿ ಆರೋಪಿ ಪರ ವಕೀಲರು ಧಾರವಾಡದ ಹೈಕೋರ್ಟ್‌ನಲ್ಲಿ ಈ ಪ್ರಕರಣವನ್ನು ವಜಾಗೊಳಿಸುವಂತೆ ಮನವಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ಸದ್ಯ ಈ ಪ್ರಕರಣದ ಕುರಿತಂತೆ ವಿಚಾರಣೆ ಮತ್ತು ತನಿಖೆಯನ್ನು ನಡೆಸದಂತೆ ತಾತ್ಕಾಲಿಕ ತಡೆಯಜ್ಞೆ ನೀಡಿದೆ.

ಈ ತಾತ್ಕಾಲಿಕ ತಡೆಯಾಜ್ಞೆಯಿಂದಾಗಿ ಬಂಧಿತ ಆರೋಪಿ ಅರ್ಷದ್ ಖಾನ್ ಕೂಡ ತಾತ್ಕಾಲಿಕವಾಗಿ ಬಿಡುಗಡೆಯಾದಂತಾಗಿದ್ದಾನೆ.

12 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಕಲಿ ನೋಟುಗಳನ್ನು ಮನೆಯೊಂದರಲ್ಲಿ ಬಚ್ಚಿಟ್ಟ ಹಾಗೂ ಆ ಮನೆಯಲ್ಲಿ ನೋಟು ಎಣಿಸುವ ಯಂತ್ರ ಸಿಕ್ಕ ಪ್ರಕರಣ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.