ಗುಂಡ್ಲುಪೇಟೆ: ವಿಪ್ ಉಲ್ಲಂಘನೆ ಆರೋಪದ ಮೇರೆಗೆ ಪುರಸಭೆಯ ಐವರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಿದ್ದ ಜಿಲ್ಲಾಧಿಕಾರಿ ಆದೇಶಕ್ಕೆ ಉಚ್ಚ ನ್ಯಾಯಾಲಯ ಮಾ. 25ರವರೆಗೆ ತಡೆ ನೀಡಿದೆ.
ಜ.30ರಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಹೊರಡಿಸಿದ್ದ ಸದಸ್ಯತ್ವ ರದ್ದು ಆದೇಶ ಪ್ರಶ್ನಿಸಿ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಅನರ್ಹ ಐವರು ಸದಸ್ಯರು ಅರ್ಜಿ ಸಲ್ಲಿಸಿದ್ದರು. ಸೋಮವಾರ ವಿಚಾರಣೆ ನಡೆಸಿದ ನ್ಯಾಯಾಲಯ ಜಿಲ್ಲಾಧಿಕಾರಿಗಳ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿ ಮಾ.25ರಂದು ವಿಚಾರಣೆ ನಡೆಸಲು ಜಿಲ್ಲಾಧಿಕಾರಿ ಕಚೇರಿಯಿಂದ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದೆ.
2024ರ ಸೆ.4 ರಂದು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯಿಂದ ಜಯ ಗಳಿಸಿದ್ದ ಐವರು ಪಕ್ಷದ ವಿಪ್ ಉಲ್ಲಂಘಿಸಿದ್ದರು. ಪುರಸಭೆ ಸದಸ್ಯರಾದ ಕಿರಣ್‌ಗೌಡ, ಹೀನಾ ಕೌಸರ್ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಆದರೆ ರಮೇಶ್, ರಾಣಿಲಕ್ಷ್ಮೀ ದೇವಿ, ವೀಣಾ ಮಂಜುನಾಥ್ ಮತದಾನದಿಂದ ದೂರವುಳಿದಿದ್ದರು. ಕಳೆದ 2024ರ ಸೆ.12ರಂದು ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಅವರಿಗೆ ಪುರಸಭೆ ಬಿಜೆಪಿ ಸದಸ್ಯರಾದ ಪಿ.ಗಿರೀಶ್, ಎಸ್.ಕುಮಾರ್ ದೂರು ಸಲ್ಲಿಸಿ ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ(ಪಕ್ಷಾಂತರ ನಿಷೇಧ) ಅಧಿನಿಯಮ 1987ರಡಿ ವಿಪ್ ಉಲ್ಲಂಘಿಸಿದ ಸದಸ್ಯರ ಸದಸ್ಯತ್ವ ರದ್ದುಗೊಳಿಸುವಂತೆ ಕೋರಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಜ.30ರಂದು ಪುರಸಭೆ ಸದಸ್ಯರಾದ ಎನ್.ರಮೇಶ್, ಕಿರಣ್‌ಗೌಡ, ಹೀನಾಕೌಸರ್, ರಾಣಿಲಕ್ಷ್ಮೀದೇವಿ ಹಾಗೂ ವೀಣಾ ಮಂಜುನಾಥ್‌ರ ಸದಸ್ಯತ್ವವನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು.