ಜಿಲ್ಲೆ

ಹೈಕೋರ್ಟ್​ನ ಮೂರು ಪೀಠಗಳಲ್ಲಿ ಕಕ್ಷಿದಾರರ ಪ್ರವೇಶಕ್ಕೆ ನಿರ್ಬಂಧ

Mandara

ಬೆಂಗಳೂರು: ಹೈಕೋರ್ಟ್​ನ ಮೂರು ಪೀಠಗಳು, ಬೆಂಗಳೂರು ನಗರ ಮತ್ತು ಕಲಬುರಗಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳಿಗೆ ಕಕ್ಷಿದಾರರು ಪ್ರವೇಶಿಸುವುದಕ್ಕೆ ಹೈಕೋರ್ಟ್ ಸಂಪೂರ್ಣ ನಿರ್ಬಂಧ ಹೇರಿದೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಅವರ ಆದೇಶದ ಮೇರೆಗೆ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಬುಧವಾರ ನೋಟಿಸ್ ಪ್ರಕಟಿಸಿದ್ದಾರೆ.

ಕರ್ನಾಟಕ ಹೈಕೋರ್ಟ್ ಬೆಂಗಳೂರಿನ ಪ್ರಧಾನ ಪೀಠ, ಕಲಬುರಗಿ ಮತ್ತು ಧಾರವಾಡ ನ್ಯಾಯಪೀಠ, ಬೆಂಗಳೂರು ನಗರದಲ್ಲಿರುವ ಸಿಟಿ ಸಿವಿಲ್, ಜಿಲ್ಲಾ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನ್ಯಾಯಾಲಯಗಳು (ನಗರ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ) ಮತ್ತು ಕಲಬುರಗಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳು ಮತ್ತು ನ್ಯಾಯಾಧಿಕರಣಗಳ ಆವರಣ ಪ್ರವೇಶ ಮಾಡುವುದಕ್ಕೆ ಕಕ್ಷಿದಾರರಿಗೆ ಅವಕಾಶ ಕಲ್ಪಿಸುವುದಿಲ್ಲ ಎಂದು ನೋಟಿಸ್​ನಲ್ಲಿ ಹೇಳಲಾಗಿದೆ.

ವಕೀಲರು, ನ್ಯಾಯಾಲಯದ ಸಿಬ್ಬಂದಿ, ಸರ್ಕಾರಿ ಮತ್ತು ಸ್ಥಳೀಯ ಸಂಸ್ಥೆಯ ಅಧಿಕಾರಿಗಳು, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ತಮ್ಮ ಅಧಿಕೃತ ಕಾರ್ಯಗಳ ನಿಮಿತ್ತ ಕೋರ್ಟ್​ಗಳಿಗೆ ಭೇಟಿ ನೀಡಬಹುದು. ಅವರಿಗೆ ಪ್ರವೇಶ ಕಲ್ಪಿಸಲಾಗುತ್ತದೆ. ಒಂದೊಮ್ಮೆ ಕಕ್ಷಿದಾರರು ಕೊರ್ಟ್​ಗೆ ಭೇಟಿ ನೀಡುವುದು ಅಗತ್ಯವಾದರೆ, ಅವರ ಪರ ವಕೀಲರು ತಮ್ಮ ಕಕ್ಷಿದಾರರು ಕೋರ್ಟ್​ಗೆ ಹಾಜರಾಗುವುದು ಕಡ್ಡಾಯವಾಗಿದೆ ಎಂಬುದಾಗಿ ತಿಳಿಸಿ ಲೆಟರ್​ಹೆಡ್ ವಿತರಿಸಬೇಕು. ವಕೀಲರ ಸರ್ಟಿಫಿಕೇಟ್​ನಲ್ಲಿ ಕಕ್ಷಿದಾರರಿಗೆ ಕೋರ್ಟ್ ಪ್ರವೇಶ ಮಾಡಲು ಅನುಮತಿ ನೀಡುವುದಕ್ಕೆ ಇರುವ ಕಾರಣಗಳನ್ನು ಸಂಕ್ಷಿಪ್ತವಾಗಿ ನಮೂದಿಸಬೇಕು ಎಂದು ನೋಟಿಸ್​ನಲ್ಲಿ ತಿಳಿಸಲಾಗಿದೆ.

ಅರ್ಜಿಯೊಂದರ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಗಳು ವಕೀಲರನ್ನು ಉದ್ದೇಶಿಸಿ, ಗುರುವಾರದಿಂದ ಕೋರ್ಟ್ ಆವರಣ ಪ್ರವೇಶಕ್ಕೆ ಕಕ್ಷಿದಾರರಿಗೆ ನಿರ್ಬಂಧ ಹೇರಲಾಗುವುದು. ಒಂದೊಮ್ಮೆ ಕಕ್ಷಿದಾರರು ಕೋರ್ಟ್​ಗೆ ಭೇಟಿ ನೀಡಬೇಕಾದರೆ, ತಮ್ಮ ವಕೀಲರಿಂದ ಸರ್ಟಿಫಿಕೇಟ್ ತರಬೇಕಾಗುತ್ತದೆ ಎಂದು ತಿಳಿಸಿದರು.