ಜಿಲ್ಲೆ

ಜಿಲ್ಲಾಸ್ಪತ್ರೆಗೆ ಹೈಕೋರ್ಟ್ ನ್ಯಾಯಾಧೀಶರ ಧಿಡೀರ್ ಭೇಟಿ

ಉಡುಪಿ: ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಶನಿವಾರ ಬೆಳಗ್ಗೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾಯಮೂರ್ತಿ ವೀರಪ್ಪ ಧಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆಸ್ಪತ್ರೆಯಲ್ಲಿನ ವ್ಯವಸ್ಥೆಗಳನ್ನು  ಪರಿಶೀಲಿಸಿ, ರೋಗಿಗಳ ಜೊತೆಗೆ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಯ ಕಟ್ಟಡ ಹಳೆಯದಾಗಿದೆ. ಹೀಗಾಗಿ ನೂತನವಾಗಿ ಜಿಲ್ಲಾಸ್ಪತ್ರೆ ನಿರ್ಮಾಣಗೊಳ್ಳುತ್ತಿದೆ. ಸಾರ್ವಜನಿಕರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿನ ಆರೋಗ್ಯ ಸೇವೆಯನ್ನು ಬಳಸುವಂತೆ ಪ್ರೋತ್ಸಾಹಿಸಬೇಕು. ಜಿಲ್ಲೆಯಲ್ಲಿ ನಿರ್ಗತಿಕರ ಕೇಂದ್ರ ಇಲ್ಲ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡಲಾಗುವುದು. ಮಾಧ್ಯಮಗಳು ಈ ಬಗ್ಗೆ  ಗಮನ ಸೆಳೆಯಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ, ಜಿಲ್ಲಾ ಸರ್ಜನ್ ಡಾ. ಮಧುಸೂಧನ್, ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಉಪಸ್ಥಿತರಿದ್ದರು.