ಜಿಲ್ಲೆ

ವೃತ್ತಿ ನೈಪುಣ್ಯತೆ ಸಮಾಜದ ಒಳಿತಿಗೆ ಮೀಸಲಿರಲಿ

ಗೋಪಾಲಕೃಷ್ಣ ಪಾದೂರ್

ಉಡುಪಿ: ವೃತ್ತಿಯಲ್ಲಿ ಆದರ್ಶ ಮಾತ್ರ ಸಾಲದು. ನೈಪುಣ್ಯತೆಯೂ ಅಗತ್ಯ. ಇದನ್ನು ಸಮಾಜದ ಒಳಿತಿಗಾಗಿ ಉಪಯೋಗಿಸಿಕೊಳ್ಳಬೇಕು. ಹಿರಿಯರು ಯುವ ತಲೆಮಾರಿಗೆ ಪ್ರೇರಣೆಯಾಗಬೇಕು. ವೃತ್ತಿ ನತೆ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಹೈಕೋರ್ಟ್​ ನ್ಯಾಯಮೂರ್ತಿ ಸಿ.ಎಂ. ಜೋಶಿ ಹೇಳಿದರು.

ಸೋಮವಾರ ಉಡುಪಿ ವಕೀಲರ ಸಂಘದಲ್ಲಿ ಹಿರಿಯ ವಕೀಲ ದಿ.ವಿ.ಮೋಹನ್​ದಾಸ್​ ಶೆಟ್ಟಿಯವರ ಭಾವಚಿತ್ರ ಅನಾವರಣಗೊಳಿಸಿ ಅವರು ಮಾತನಾಡಿದರು.

50 ವರ್ಷದ ಹಿಂದಿನ ವಕೀಲ ವೃತ್ತಿಗೂ, ಇಂದಿನ ಕಾಲಘಟ್ಟಕ್ಕೂ ಬಹಳಷ್ಟು ವ್ಯತ್ಯಾಸ ಇದೆ. ಶಾಲಾ, ಕಾಲೇಜುಗಳಲ್ಲಿ ಕೌಶಲ್ಯಗಳನ್ನು ಕಲಿಯಲು ಸಾಧ್ಯವಿಲ್ಲ. ಇವೆಲ್ಲವೂ ಹಿರಿಯ ವಕೀಲರ ಮೂಲಕವೇ ತಿಳಿದುಕೊಳ್ಳಬೇಕು. ವೃತ್ತಿಯಲ್ಲಿ ಉನ್ನತ ಸಾಧನೆಗೈದವರನ್ನು ಕಳೆದುಕೊಂಡಾಗ ಕುಟುಂಬವರ್ಗ, ಆತ್ಮೀಯರಿಗೆ ಮಾತ್ರವಲ್ಲದೆ ಸಮಾಜಕ್ಕೆ ದೊಡ್ಡ ನಷ್ಟ. ಕಾನೂನು ವೃತ್ತಿಯಲ್ಲಿ ಹೆಜ್ಜೆ ಇರಿಸಿದ ಯುವ ವೃತ್ತಿಪರರೂ ನಷ್ಟ ಅನುಭವಿಸುತ್ತಾರೆ ಎಂದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಕಿರಣ್​.ಎಸ್​.ಗಂಗಣ್ಣನವರ್​ ಮಾತನಾಡಿ, ಸಮಾಜದಲ್ಲಿರುವ ಅನೇಕ ವೃತ್ತಿಗಳಲ್ಲಿ ಆರಂಭದಲ್ಲೇ ಆದಾಯ ಇರುತ್ತದೆ. ಆದರೆ ವಕೀಲ ವೃತ್ತಿಯಲ್ಲಿ ಆರಂಭದಲ್ಲಿ ಆದಾಯ, ಕೇಸು ಬರುವುದಿಲ್ಲ. ಪರಿಣತಿ ಸಾಧಿಸಿದ ನಂತರ ಪ್ರಕರಣ, ಆದಾಯ ಒಟ್ಟಿಗೆ ಬರುತ್ತದೆ. ವೃತ್ತಿಯ ಬಗ್ಗೆ ಅನೇಕ ಕನಸುಗಳಿರುತ್ತವೆ. ಉತ್ತಮ ಗುಣಗಳನ್ನು ಅಳವಡಿಸಿಕೊಂಡಾಗ ಸಾರ್ಥಕ ಬದುಕು ನಡೆಸಲು ಸಾಧ್ಯ ಎಂದರು. ದಿ.ಮೋಹನ್​ದಾಸ್​ ಶೆಟ್ಟಿಯವರ ಪತ್ನಿ ರಶ್ಮಿ ಎಂ. ಶೆಟ್ಟಿ ಉಪಸ್ಥಿತರಿದ್ದರು.

ವಕೀಲ ಆನಂದ್​ ಮಡಿವಾಳ ಪ್ರಸ್ತಾವನೆಗೈದರು. ಇಂಚರಾ ಶಿವಪುರ ಪ್ರಾರ್ಥಿಸಿದರು. ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್​ ಪ್ರವಿಣ್​ ಕುಮಾರ್​ ಸ್ವಾಗತಿಸಿ, ಪ್ರ.ಕಾರ್ಯದರ್ಶಿ ರಾಜೇಶ್​.ಎ.ಆರ್​ ವಂದಿಸಿದರು. ನ್ಯಾಯವಾದಿ ಸಹನಾ ಕುಂದರ್​ ನಿರೂಪಿಸಿದರು.