ಬೆಂಗಳೂರು: ಹಾಸನ ಸಂಸದ ಸ್ಥಾನದಿಂದ ತಮ್ಮನ್ನು ಅನರ್ಹಗೊಳಿಸಿದ ಆದೇಶಕ್ಕೆ ತಡೆ ಕೋರಿ ಜೆಡಿಎಸ್ ಯುವ ನಾಯಕ ಪ್ರಜ್ವಲ್ ರೇವಣ್ಣ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಸುಳ್ಳು ಆದಾಯ ಪ್ರಮಾಣ ಪತ್ರ ಸಲ್ಲಿಕೆ ಆರೋಪ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದಿತ್ತು. ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕೆಂದು ಕೋರಿ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಯಗೊಂಡಿರುವ ಅಂದಿನ ಬಿಜೆಪಿಯ ಎ.ಮಂಜು ಸಲ್ಲಿಕೆ ಮಾಡಿದ್ದರು. ಆದಾಯ ತೆರಿಗೆ ವಿವರಗಳಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ದಾಖಲೆಗಳಲ್ಲಿ ಸುಳ್ಳು ಅಂಕಿ ಅಂಶಗಳಿಂದ ಕೂಡಿದೆ ಎಂದು ದೂರುದಾರರು ಗಂಭೀರ ಆರೋಪ ಮಾಡಿದ್ದರು.
ಈ ಕುರಿತಾಗಿ ವಿಚಾರಣೆ ನಡೆಸಿದ ಹೈಕೋರ್ಟ್, ಚುನಾವಣಾ ಅಕ್ರಮದ ಆಧಾರದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ಸೆಪ್ಟೆಂಬರ್ 1 ರಂದು ಹೈಕೋರ್ಟ್ ತೀರ್ಪು ನೀಡಿದೆ. ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುವವರೆಗೆ ಅನರ್ಹತೆ ಆದೇಶಕ್ಕೆ ತಡೆ ನೀಡುವಂತೆ ಕೋರಿ ಪ್ರಜ್ವಲ್ ರೇವಣ್ಣ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಕುರಿತಾಗಿ ವಿಚಾರಣೆ ನಡೆಸಿದ ಹೈಕೋರ್ಟ್ ಪ್ರಜ್ವಲ್ ರೇವಣ್ಣ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಪ್ರಜ್ವಲ್ ರೇವಣ್ಣ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ.
ಹಾಸನ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಪ್ರಜ್ವಲ್ ರೇವಣ್ಣ, ಶುಕ್ರವಾರ ಅಥವಾ ಸೋಮವಾರ ಪ್ರಕರಣ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಹಿರಿಯ ವಕೀಲ ಮುಕುಲ್ ರೊಹಟಗಿ ಮತ್ತು ವೇಣುಗೋಪಾಲ ಪ್ರಜ್ವಲ್ ಪರ ವಾದ ಮಂಡನೆ ಮಾಡಲಿದ್ದಾರೆ.