ಮಂಗಳೂರು: ಕೆಲವು ದಿನಗಳ ಹಿಂದೆ ದಕ್ಷಿಣ ಕನ್ನಡದಲ್ಲಿ ನಡೆದ ಘಟನೆ ಹಾಗೂ ಸದ್ಯ ಶಿವಮೊಗ್ಗದಲ್ಲಿ ಉಂಟಾಗಿರುವ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 35 ಕಡೆ ಚೆಕ್‌ಪೋಸ್ಟ್‌ಗಳನ್ನು ಅಳವಡಿಸಿ, ಬಿಗು ತಪಾಸಣೆ ನಡೆಸಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಬರುವ ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶೋತ್ಸವ ಸೇರಿದಂತೆ ಸಾಲು ಸಾಲು ಹಬ್ಬಗಳ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಂಗಳೂರು ನಗರಕ್ಕೆ ಆಗಮಿಸುವ ತಲಪಾಡಿ ಗಡಿಭಾಗ, ಉಡುಪಿ ಗಡಿಭಾಗ, ಸುರತ್ಕಲ್ ಪೊಲೀಸ್ ಠಾಣೆ, ಕೆಲವೊಂದು ಸೂಕ್ಷ್ಮ ಪ್ರದೇಶದಲ್ಲಿ ನಾಕಾಬಂಧಿ ಹಾಕಿ ದ್ವಿಚಕ್ರ ವಾಹನ, ಕಾರು ಸೇರಿದಂತೆ ಇತರ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಕಡೆ ಹಾಗೂ ಸುರತ್ಕಲ್, ಬಂದರ್ ವ್ಯಾಪ್ತಿಯಲ್ಲಿ 3ರಿಂದ 4 ಕಡೆ ತಪಾಸಣೆ ನಡೆಸಲಾಗುತ್ತಿದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ತಪಾಸಣೆ ನಡೆಸುವುದು ಅನಿವಾರ್ಯವಾಗಿದ್ದು, ಸಾರ್ವಜನಿಕರು ಸಹಕಾರ ನೀಡಬೇಕೆಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.