ಕಕ್ಕೇರಿ: ಉನ್ನತ ಗುರಿ ಮತ್ತು ಉತ್ತಮ ವ್ಯಕ್ತಿತ್ವ ವಿಕಾಸಕ್ಕೆ ಧರ್ಮ ಅಗತ್ಯ. ಧರ್ಮಾಚರಣೆ ಇಲ್ಲದ ವ್ಯಕ್ತಿತ್ವಕ್ಕೆ ಬೆಲೆ, ನೆಲೆ ಸಿಗುವುದಿಲ್ಲ ಎಂದು ಬಿಳಕೆ(ಅವರೋಳ್ಳಿ) ರುದ್ರಸ್ವಾಮಿ ಮಠದ ಚನ್ನಬಸವ ದೇವರು ಸ್ವಾಮೀಜಿ ಹೇಳಿದರು.
ಸಮೀಪದ ಸುರಪುರ ಕೇರವಾಡ(ಹೊಸ ಹಿಡಕಲ್) ಅಂಬಲಿ ಒಡೆಯ ಶ್ರೀ ಅಡವಿಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರದಲ್ಲಿ ಮಾತನಾಡಿದ ಅವರು, ಯೋಗ್ಯ ಸಂಸ್ಕಾರ ದೊರೆತರೆ ಬದುಕು ಸಾರ್ಥಕವಾಗುತ್ತದೆ. ಸೌಹಾರ್ದಯುತ ಸಹಬಾಳ್ವೆ ಜೀವನದ ಪರಮ ಗುರಿಯಾಗಬೇಕು. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಮೂಲ ಸಂಸ್ಕೃತಿ ಹಾಗೂ ಪರಂಪರೆ ಮರೆಯಬಾರದು ಎಂದರು.
ಖಡಕಲಾಟ ಕುಮಾರೇಶ್ವರ ವಿರಕ್ತಮಠದ ಘನ ಲಿಂಗ ದೇವರು ಮಾತನಾಡಿ, ಹಣ ಗಳಿಕೆಯಷ್ಟೇ ಜೀವನದ ಗುರಿಯಲ್ಲ. ಬದುಕಿಗೆ ಅಗತ್ಯವಾದ ಜ್ಞಾನ ಸಂಪಾದಿಸುವುದು ಮುಖ್ಯವಾಗಿದೆ ಎಂದು ತಿಳಿಸಿದರು.
ಸುರಪುರ ಕೇರವಾಡದ ಪ್ರಭು ಅಡವಿಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಉತ್ತರ ಕನ್ನಡ ಜಿಲ್ಲೆಯ ಬಿಕೆ ಹಳ್ಳಿ ಗ್ರಾಮದ ಶ್ರೀ ಶಕ್ತಿ ಅಶೋಕ ನೇತ್ರಿ ಭರತನಾಟ್ಯ ಕಲಾವಿದರ ತಂಡ ಭರತನಾಟ್ಯ ಪ್ರದರ್ಶಿಸಿತು. ಭಕ್ತರು ಪಾಲ್ಗೊಂಡಿದ್ದರು.