ಬೆಳಗಾವಿ: ಬೆಳಗಾವಿ ಜಿಲ್ಲೆಯ ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ-ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಸುವ ಯೋಜನೆ ರದ್ದು ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ)ಯಿಂದ ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದ ಪದಾಧಿಕಾರಿಗಳು, ಯೋಜನೆ ಕೈ ಬಿಡುವಂತೆ ಘೋಷಣೆ ಕೂಗಿದರು.
ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, ಬೆಳಗಾವಿ ಮಹಾನಗರಕ್ಕೆ ಮತ್ತು ಹಲವು ತಾಲೂಕುಗಳ ನೂರಾರು ಗ್ರಾಮಗಳಿಗೆ ಹಿಡಕಲ್ ಜಲಾಶಯ ಮುಖ್ಯ ಜಲದ ಮೂಲ. ಪ್ರತಿವರ್ಷ ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ಹಿಡಕಲ್ ಜಲಾಶಯ ಖಾಲಿಯಾಗಿ ಜನರು ಸಮಸ್ಯೆ ಎದುರಿಸುತ್ತಾರೆ. ಬೇಸಿಗೆಯಲ್ಲಿ ಎಡದಂಡೆ ಮತ್ತು ಬಲದಂಡೆ ಎರಡೂ ಕಾಲುವೆಗಳಿಂದ ಕೃಷಿ ಜಮೀನುಗಳಿಗೆ ನೀರು ಹರಿಸಲಾಗುತ್ತಿದ್ದು, ಹಿಡಕಲ್ ಜಲಾಶಯ ಬೆಳಗಾವಿ ಜಿಲ್ಲೆಯ ಜೀವನಾಡಿಯಾಗಿದೆ ಎಂದರು.
ಬೆಳಗಾವಿಯ ನವೀಲು ತೀರ್ಥ ಜಲಾಶಯದಿಂದ ಈಗಾಗಲೇ ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳಿಗೆ ನೀರು ಪೂರೈಸಲಾಗುತ್ತಿದೆ. ಇದಕ್ಕೆ ಬೆಳಗಾವಿ ಜಿಲ್ಲೆಯ ಜನ ಎಂದಿಗೂ ವಿರೋಧ ಮಾಡಿಲ್ಲ. ಆದರೆ, ಸರ್ಕಾರ ಈಗ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಪ್ರದೇಶ ಮಂಡಳಿಯಿಂದ ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ- ಧಾರವಾಡ ಕೈಗಾರಿಕಾ ಪ್ರದೇಶಕ್ಕೆ 0.5 ಟಿಎಂಸಿ ನೀರು ಪೂರೈಸುವ ಕಾಮಗಾರಿ ಆರಂಭಿಸಿದ್ದು, ಸರ್ಕಾರ ಕೂಡಲೇ ಈ ಯೋಜನೆ ರದ್ದು ಮಾಡಬೇಕು. ಸರ್ಕಾರ ಈ ವಿಷಯ ಗಂಭೀರವಾಗಿ ಪರಿಗಣಿಸಬೇಕು. ನಿರ್ಲಕ್ಷೃ ಮಾಡಿದರೆ ಬೆಳಗಾವಿ ಜಿಲ್ಲೆಯ ಎಲ್ಲ ಸಂಘಟನೆಗಳು ಮತ್ತು ರೈತರು ಸೇರಿ ಕಾಮಗಾರಿ ತಡೆಯಬೇಕಾಗುತ್ತದೆ. ಸರ್ಕಾರ ಬೆಳಗಾವಿ ಜಿಲ್ಲೆಯ ಬಂಡಾಯ ಎದುರಿಸಬೇಕಾಗುತ್ತದೆ ಎಂದು ಮನವಿ ಮೂಲಕ ಎಚ್ಚರಿಕೆ ನೀಡಿದರು.
ಮುಖಂಡರಾದ ಸುರೇಶ ಗವನ್ನವರ, ಗಣೇಶ ರೊಕಡೆ, ಬಾಲು ಜಡಗಿ, ಬಸವರಾಜ ಅವರಳ್ಳಿ, ಸತೀಶ್ ಗುಡದವರ ಇತರರಿದ್ದರು.