ಜಿಲ್ಲೆ

ತೊಟ್ಟು ನೀರಿಗೂ ಎದುರಾಗಿದೆ ಗೋಳು!

ವಿನಯ ಹೆಗಡೆ

ರಾಮಚಂದ್ರ ಕಿಣಿ ಭಟ್ಕಳ
ತಾಲೂಕಿನ ಶಿರಾಲಿ ಪಂಚಾಯಿತಿ ವ್ಯಾಪ್ತಿಯ ಹೊಳೆಯಲ್ಲಿ ಹೂಳು ತುಂಬಿದ್ದರಿಂದ ತೊಟ್ಟು ನೀರಿಗೂ ಜನರು ಪರದಾಡುವಂತಾಗಿದೆ. ನೀರಿನ ಮಧ್ಯದಲ್ಲೆ ಜೀವನ ಸಾಗಿಸುತ್ತಿದ್ದರೂ ಕುಡಿಯುವ ನೀರಿಗೆ ಮಾತ್ರ ಬೇರೆಡೆಗೆ ಅವಲಂಬಿಸಬೇಕಿದೆ.

ಇದು ತಾಲೂಕಿನ ಶಿರಾಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಣಬಾವಿ ಹಾಗೂ ಅಳಿವೆಕೋಡಿ ಜನರ ಜೀವನದ ವ್ಯಥೆ. ಬಹುತೇಕ ಮೀನುಗಾರರೇ ಇರುವ ಈ ಪ್ರದೇಶದಲ್ಲಿ ಸಾವಿರಾರು ಕುಟುಂಬಗಳಿವೆ. ಸಣಬಾವಿ, ಅಳಿವೆಕೋಡಿ ಪ್ರದೇಶಕ್ಕೆ ಹೊಂದಿಕೊಂಡೇ ಸಣಬಾವಿ ಹೊಳೆ ಇದೆ.

ಇಲ್ಲಿನ ಜನರು ಇದನ್ನೆ ಅವಲಂಬಿಸಿ ಮೀನುಗಾರಿಕೆ, ಮೀನುಗೂಡು ಕೃಷಿ ನಡೆಸುತ್ತಿದ್ದಾರೆ. ಆದರೆ, ಬೇಸಿಗೆ ಬಂತೆಂದರೆ ಇಲ್ಲಿನ ಜನರ ಜೀವನ ಸಂಕಷ್ಟ ಆರಂಭವಾಗುತ್ತದೆ.


ತೆರವುಗೊಳಿಸದ ಹಳೆಯ ಸೇತುವೆ: ತಾಲೂಕಿನ ಶಿರಾಲಿಯಿಂದ ಅಳಿವೆಕೋಡಿಗೆ ತೆರಳಲು ಕೆಲವು ವರ್ಷದ ಹಿಂದೆ ಹೊಸ ಸೇತುವೆ ನಿರ್ಮಿಸಲಾಗಿತ್ತು. ಹೊಸ ಸೇತುವೆ ನಿರ್ಮಾಣವಾದ ಬಳಿಕ ಶಿಥಿಲಗೊಂಡ ಹಳೆಯ ಸೇತುವೆಯನ್ನು ತೆರವುಗೊಳಿಸಬೇಕಿತ್ತು, ಆದರೆ, ಸಂಬಂಧಿಸಿದ ಇಲಾಖೆಯ ಬೇಜವಾಬ್ದಾರಿಯಿಂದ ಹಲವು ವರ್ಷಗಳಾದರೂ ಸೇತುವೆಯನ್ನು ತೆರವುಗೊಳಿಸಿಲ್ಲ.

ಗುಡ್ಡಗಾಡು ಪ್ರದೇಶದಿಂದ ಮಳೆಗಾಲದಲ್ಲಿ ಸಮುದ್ರಕ್ಕೆ ಸೇರಲು ನೀರು ರಭಸದಿಂದ ಹರಿದು ಬರುತ್ತದೆ. ಇಲ್ಲಿ ಸೇತುವೆ ಅಡ್ಡ ಇರುವುದರಿಂದ ನೀರಿನ ವೇಗ ಕಡಿಮೆ ಆಗುತ್ತಿದೆ. ಇದರಿಂದಾಗಿ ನೀರಿನೊಂದಿಗೆ ಬಂದ ಮಣ್ಣು ಇಲ್ಲಿಯೇ ಶೇಖರಣೆ ಆಗುತ್ತಿದೆ.

ಒಂದೊಮ್ಮೆ ರಭಸವಾಗಿ ಬಂದ ನೀರು ಹಾಗೆಯೆ ಸರಾಗವಾಗಿ ಹರಿದು ಹೋಗಿದ್ದೆ ಆದರೆ ಇಲ್ಲಿ ಹೂಳು ಶೇಖರಣೆ ಆಗುವುದಿಲ್ಲ ಎನ್ನುತ್ತಾರೆ ಸ್ಥಳೀಯರು.

ತೊಟ್ಟು ನೀರಿಗೂ ತಾತ್ವಾರ

ಒಂದೆಡೆ ಸಮುದ್ರ, ಇನ್ನೊಂದೆಡೆ ಹರಿಯುವ ನದಿ ನೀರಿನೊಂದಿಗೆ ಬದುಕು ಕಟ್ಟಿಕೊಂಡ ಜನರಿಗೆ ಬೇಸಿಗೆ ಬಂತೆಂದರೆ ಬಾವಿಯ ನೀರು ಕುಡಿಯಲು ಆಗುವುದಿಲ್ಲ. ನದಿಯ ತಟದಲ್ಲಿ ಹೂಳು ತುಂಬಿದ್ದು ಅಲ್ಲಿ ಶೇಖರಣೆಯಾದ ಉಪ್ಪು ನೀರು ಸುತ್ತಮುತ್ತಲಿನ ಬಾವಿಯ ನೀರಿಗೆ ಮಿಶ್ರಣವಾಗುತ್ತದೆ. ಇದರಿಂದ ಬಾವಿಯಲ್ಲಿ ನೀರಿದ್ದರೂ ಬಳಸಲು ಆಗದಂತ ಸ್ಥಿತಿ ಇಲ್ಲಿನ ಸ್ಥಳೀಯರದ್ದು.

ಆತಂಕದಲ್ಲಿ ಮೀನು ಪಂಜರ ಕೃಷಿ

ಭಟ್ಕಳ ತಾಲೂಕಿನಲ್ಲಿ ಅಂದಾಜಿನ ಪ್ರಕಾರ 50ಕ್ಕೂ ಅಧಿಕ ಮೀನುಗಾರರು ಮೀನು ಪಂಜರ ಕೃಷಿ ನಡೆಸುತ್ತಿದ್ದಾರೆ. ಸಣಬಾವಿ ಅಳಿವೆಕೋಡಿ ಪ್ರದೇಶದಲ್ಲಿ ಸುಮಾರು 10 ಮಂದಿ ಲಕ್ಷಾಂತರ ರೂ. ವ್ಯಯಿಸಿ ಈ ಗೂಡಿನಲ್ಲಿ ಮೀನು ಸಾಕಣೆ ಮಾಡುತ್ತಾರೆ. ಬೇಸಿಗೆ ಸಮಯದಲ್ಲಿ ನೀರು ಕಡಿಮೆಯಾಗಿ ಬಿಸಿಲಿನ ತಾಪಕ್ಕೆ ನೀರು ಬಿಸಿಯಾಗುತ್ತದೆ. ಇದರಿಂದ ಪಂಜರದಲ್ಲಿನ ಮೀನುಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಹಳೆಯ ಸೇತುವೆಯಿಂದ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಇಲಾಖೆ ಕ್ಯಾರೆ ಎನ್ನುತ್ತಿಲ್ಲ ಎನ್ನುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಸಣಬಾವಿಯಲ್ಲಿ ಹಳೆಯ ಸೇತುವೆಯನ್ನು ತೆರವುಗೊಳಿಸಿದರೆ ಇಲ್ಲಿನ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ಸಿಗುತ್ತದೆ. ಹಳೆಯ ಸೇತುವೆ ನೀರಿನ ರಭಸವನ್ನು ತಡೆಯುತ್ತಿದ್ದು, ಹೂಳು ತುಂಬಿಕೊಳ್ಳುವಂತೆ ಮಾಡಿದೆ. ಇದರಿಂದ ಮೀನು ಕೃಷಿ ಮಾಡುವವರು, ಸ್ಥಳೀಯರು ಎಲ್ಲರೂ ತೊಂದರೆ ಅನುಭವಿಸುವಂತಾಗಿದೆ.ರಮೇಶ ಮೊಗೇರ, ಸದಸ್ಯರು, ಅಳ್ವೆಕೋಡಿ ಮೀನುಗಾರರ ಸಹಕಾರ ಸಂಘ