ಜಿಲ್ಲೆ

ವಿದ್ಯುತ್ ಶಾಕ್ ತಡೆಗೆ ಹೆಸ್ಕಾಂ ಯತ್ನ

ವಿನಯ ಹೆಗಡೆ

ಶಿರಸಿ: ಮಳೆಗಾಲದ ದಿನಗಳು ಸಮೀಪಿಸುತ್ತಿವೆ. ಗಾಳಿ ಮಳೆಗೆ ವಿದ್ಯುತ್ ತಂತಿಗಳ ಮೇಲೆ ಮರ ಮುರಿದುಬಿದ್ದು ಹಾನಿಯಾಗುವ ಸಾಧ್ಯತೆಯೂ ಹೆಚ್ಚುತ್ತಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ 5 ಜನ ಹಾಗೂ 32 ಜಾನುವಾರುಗಳು ಸಾವನ್ನಪ್ಪಿವೆ. ಈ ವರ್ಷ ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲು ಹೆಸ್ಕಾಂ ಈಗಿನಿಂದಲೇ ಎಚ್ಚರಿಕೆ ವಹಿಸುತ್ತಿದೆ.

ವಿದ್ಯುತ್ ಹರಿಯುವ ಪ್ರಮಾಣ ಬೇಸಿಗೆ ಅಥವಾ ಚಳಿಗಾಲಕ್ಕೆ ಹೋಲಿಸಿದರೆ ಮಳೆಗಾಲದಲ್ಲಿ ಜಾಸ್ತಿ. 11 ಸಾವಿರ ವೋಲ್ಟೇಜ್ ಇರುವ, ವಿದ್ಯುತ್ ಪರಿವರ್ತಕಕ್ಕೆ ಪೂರೈಕೆಯಾಗುವ ಎಚ್. ಟಿ ಲೈನ್ ಗ್ರಾಮೀಣ ಪ್ರದೇಶದ ಬೆಟ್ಟ ಗುಡ್ಡಗಳು, ಕಾಡಿನ ಮಧ್ಯೆಯೇ ಹಾಕಿರುವ ಪ್ರಮಾಣ ಜಾಸ್ತಿ ಇದೆ.

ಮಳೆಗಾಲ ಆರಂಭಕ್ಕೂ ಮುನ್ನ ಹೆಸ್ಕಾಂ ಹೆಚ್ಚುವರಿ ತಾತ್ಕಾಲಿಕ ಕೆಲಸಗಾರರನ್ನು ಬಳಸಿಕೊಂಡು ವಿದ್ಯುತ್ ತಂತಿಗಳಿಗೆ ತಾಗುವ ಮರಗಳ ರೆಂಬೆ ಕೊಂಬೆ ಕಟಾವು ಮಾಡುವ ಕಾರ್ಯ ಮಾಡುತ್ತಿದೆ. ಇಷ್ಟೆಲ್ಲ ಆದರೂ ಸಹ ವಿದ್ಯುತ್ ಅವಘಡ ನಡೆದೇ ಇದೆ. ವಿದ್ಯುತ್ ಪರಿಕರಗಳ ನಿರ್ವಹಣೆಯ ಅನುಭವ ಇಲ್ಲದ ನಾಗರಿಕರು ವಿದ್ಯುತ್ ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ. ತಾವೇ ದುರಸ್ತಿಗೆ ಮುಂದಾಗುವುದು, ಪ್ಯೂಸ್ ಅಳವಡಿಸುವುದು, ಮನೆಯ ಸರ್ವಿಸ್ ತಂತಿಗಳ ಬಳಿ ಹಸಿಬಟ್ಟೆ ಒಣಗಿಸುವುದು, ಮನೆಯ ಕುಡಿಯುವ ನೀರಿನ ಪಂಪ್, ಮೋಟಾರ್ ಗಳನ್ನು ಸುರಕ್ಷತೆಯಿಲ್ಲದೇ ಬಳಸುವ ಕಾರಣದಿಂದ ಅವಘಡಗಳು ಸಂಭವಿಸಿವೆ. 2024-25ನೇ ಸಾಲಿನಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಇದುವರೆಗೆ 65 ವಿದ್ಯುತ್ ಅವಘಡ ಪ್ರಕರಣಗಳು ದಾಖಲಾಗಿವೆ. ಮನುಷ್ಯ, ಜಾನುವಾರುಗಳ ಸಾವುನೋವಿನ ಜತೆ 15 ಪ್ರಕರಣಗಳಲ್ಲಿ ಆಸ್ತಿ ಹಾಗೂ ಬೆಳೆಹಾನಿಗಳು ಸಂಭವಿಸಿವೆ.

ಮಳೆಗಾಲದ ಈ ದಿನಗಳಲ್ಲಿ ವಿದ್ಯುತ್ ಅವಘಡಗಳ ಬಗ್ಗೆ ರೈತರು ಮತ್ತು ಸಾರ್ವಜನಿಕರು ಹೆಚ್ಚಿನ ಕಾಳಜಿ ವಹಿಸಬೇಕಾದ ಅಗತ್ಯತೆ ಇದೆ. ಶಾಲಾ ಮಕ್ಕಳು ಸಾಗುವ ದಾರಿಯಲ್ಲಿ ವಿದ್ಯುತ್ ಮಾರ್ಗವಿದ್ದರೆ ಯಾವುದೇ ಮರಗಳು ವಿದ್ಯುತ್ ತಂತಿಗಳಿಗೆ ತಾಗುತ್ತಿದೆಯೇ ಎಂಬುದನ್ನು ಪಾಲಕರು ಪರಿಶೀಲಿಸಬೇಕು. ಅಂತಹ ಸಂದರ್ಭಗಳಿದ್ದರೆ ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸುವ ಜೊತೆಗೆ ದೈನಂದಿನ ಕಾರ್ಯದಲ್ಲಿಯೂ ವಿದ್ಯುತ್ ಅವಘಡಗಳಿಗೆ ಒಳಗಾಗದಂತೆ ಎಚ್ಚರಿಕೆ ವಹಿಸಬೇಕು ಎಂಬ ಅಭಿಪ್ರಾಯವನ್ನು ಹೆಸ್ಕಾಂ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಅವಘಡಗಳಿಗೆ ಕಾರಣವೇನು?

  •  ಮನೆಯ ಸರ್ವಿಸ್ ವೈರ್ ಹಾಳಾದಾಗ ಅಥವಾ ವಿದ್ಯುತ್ ಸಂಪರ್ಕದಲ್ಲಿ ಸಮಸ್ಯೆ ಉಂಟಾದಾಗ ಸ್ವತಃ ರಿಪೇರಿಗೆ ಮುಂದಾಗುವುದು
  • ಅನಧಿಕೃತ ಸಂಪರ್ಕ ಪಡೆಯಲು ತಂತಿಗಳಿಗೆ ವೈರ್ ಹಾಕಲು ಮುಂದಾಗುವುದು
  •  ಬೋರ್‌ವೆಲ್‌ಗಳಿಗೆ ಅಳವಡಿಸಿರುವ ಮೋಟಾರ್ ಗ್ರೌಂಡಿಂಗ್ ಆಗುವುದು
  • ಡ್ರಿಲ್ ಮಷಿನ್‌ನಿಂದ ಶಾಕ್ ತಗುಲುವುದು
  • ಪಂಚಾಯಿತಿ ನಲ್ಲಿಗಳಿಂದ ನೀರನ್ನು ಮನೆಯ ತೊಟ್ಟಿಗಳಿಗೆ ಅಥವಾ ಡ್ರಮ್ ಗಳಿಗೆ ತುಂಬಿಸುವ ಸಂದರ್ಭದಲ್ಲಿ ವಿದ್ಯುತ್ ಮೋಟಾರ್ ಅಸುರಕ್ಷತೆಯಿಂದ
  • ಕೃಷಿ ಭೂಮಿ ಅಥವಾ ಮನೆ ಸುತ್ತ ಸುರಕ್ಷತೆಗೆ ಹಾಕಲಾಗಿರುವ ಮುಳ್ಳಿನ ತಂತಿ ಬೇಲಿಗೆ ಆಕಸ್ಮಿಕವಾಗಿ ವಿದ್ಯುತ್ ತಂತಿಯ ಸಂಪರ್ಕ

ಪಂಪ್‌ಸೆಟ್‌ಗಳಿಂದ ಶಾಕ್

ಇನ್ನೊಂದೆಡೆ 2024-25ನೇ ಸಾಲಿನ ಅಪಘಾತಗಳನ್ನು ವಿಶ್ಲೇಷಿಸಿರುವ ವಿದ್ಯುತ್ ಪರಿವೀಕ್ಷಣಾಲಯ ಕೃಷಿ ಪಂಪ್ ಸೆಟ್ ವ್ಯವಸ್ಥೆಯಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯುತ್ ಅಪಘಾತ ಸಂಖ್ಯೆ ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದೆ. ದಿನದಿಂದ ದಿನಕ್ಕೆ ವಿದ್ಯುತ್ ಬಳಕೆದಾರರ ಸಂಖ್ಯೆಯೂ ಹೆಚ್ಚುತ್ತಿದ್ದು, ವಿದ್ಯುತ್ ಸರಬರಾಜು, ಬಳಕೆದಾರರ ಜಾಲ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರಲ್ಲಿ ಮುಖ್ಯವಾಗಿ ರೈತರು, ನಾಗರಿಕರಲ್ಲಿ ವಿದ್ಯುತ್ ಸುರಕ್ಷತಾ ಜಾಗೃತಿ ಆಂದೋಲನ ಮೂಡಿಸಬೇಕು, ವಿದ್ಯುತ್ ಅಪಘಾತಗಳು ಮರುಕಳಿಸದಂತೆ ತಡೆಯಬೇಕು ಎಂದು ಸೂಚಿಸಿದೆ. ಜಿಲ್ಲೆಯಲ್ಲಿ ಪ್ರಾಣಿಗಳಿಗೆ ಸಂಭವಿಸಿದ ಅಪಘಾತಗಳಿಗೆ 9.53 ಲಕ್ಷ ರೂ. ವ್ಯಕ್ತಿಗಳಿಗೆ ಸಂಭವಿಸಿದ ಅಪಘಾತಗಳಿಗೆ 15 ಲಕ್ಷ ರೂ. ಮತ್ತು ಆಸ್ತಿ ಹಾಗೂ ಬೆಳೆ ಹಾನಿ ಅಪಘಾತಗಳಿಗೆ ಸಂಬಂಧಿಸಿ 1.12 ಲಕ್ಷ ರೂ. ಪರಿಹಾರವನ್ನು ಹೆಸ್ಕಾಂನಿಂದ ನೀಡಲಾಗಿದೆ. ಜತೆ ವಿದ್ಯುತ್ ಸುರಕ್ಷಾ ಬಳಕೆ ಸಂಬಂಧ ಜಾಗೃತಿ ಮೂಡಿಸಲಾಗುತ್ತಿದೆ. | ವಿನಯ ರಾಚೋಟಿ, ಎಕ್ಸಿಕ್ಯೂಟಿವ್ ಇಂಜಿನಿಯರ್, ಹೆಸ್ಕಾಂ ಶಿರಸಿ