ಹಾನಗಲ್ಲ: ವಿದ್ಯುತ್ ಪ್ರಸರಣ ನಿಗಮವನ್ನು ಕೇಂದ್ರ ಸರ್ಕಾರ ಖಾಸಗೀಕರಣಗೊಳಿಸುತ್ತಿರುವುದನ್ನು ವಿರೋಧಿಸಿ ಹೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಟ್ಟಣದ ಹೆಸ್ಕಾಂ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಎಇಇ ಎಸ್.ಎಸ್. ಜಿಂಗಾಡೆ ಮಾತನಾಡಿ, ಖಾಸಗೀಕರಣವಾದರೆ ಸರ್ಕಾರ ರೈತರ ಪಂಪ್ಸೆಟ್ಗಳಿಗೆ ನೀಡಿರುವ ಉಚಿತ ವಿದ್ಯುತ್ ವ್ಯವಸ್ಥೆ ರದ್ದುಪಡಿಸಬಹುದು, ಎಸ್ಸಿ, ಎಸ್ಟಿ ಫಲಾನುಭವಿಗಳಿಗೆ 75 ಯೂನಿಟ್ವರೆಗೆ ನೀಡಿರುವ ಉಚಿತ ವಿದ್ಯುತ್ ಯೋಜನೆ ವಾಪಸ್ ಪಡೆಯಬಹುದು. ಹೆಸ್ಕಾಂ ಉದ್ಯೋಗಿಗಳಿಗೆ ಲಭ್ಯವಿರುವ ಉದ್ಯೋಗ ಭದ್ರತೆ ಹಿಂಪಡೆಯಬಹುದು. ಖಾಸಗೀಕರಣದಿಂದ ಗ್ರಾಹಕರಿಗೆ ಅನನುಕೂಲವಾಗಲಿದೆ. ಖಾಸಗೀಕರಣದಿಂದ ಬಹಳಷ್ಟು ಅಪಾಯ ಎದುರಿಸಬೇಕಾಗುತ್ತದೆ. ಕೇಂದ್ರದ ಖಾಸಗೀಕರಣ ಧೋರಣೆಯನ್ನು ರೈತ ಸಂಘಟನೆಗಳು ಸೇರಿದಂತೆ ಎಲ್ಲರೂ ವಿರೋಧಿಸುತ್ತಿದ್ದಾರೆ ಎಂದರು.
ಸಿಬ್ಬಂದಿ ಪರವಾಗಿ ಮಾತನಾಡಿದ ಜಯಣ್ಣ ಕೋಲಾರ, 2003ರ ವಿದ್ಯುತ್ ಕಾಯ್ದೆ ತಿದ್ದುಪಡಿ ಜನವಿರೋಧಿ ನೀತಿಯಾಗಿದೆ. ಸಿಬ್ಬಂದಿ ಮಳೆ-ಬಿಸಿಲೆನ್ನದೆ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿದ್ದಾರೆ. ಆದಾಗ್ಯೂ ಸರ್ಕಾರ ಖಾಸಗೀಕರಣಕ್ಕೆ ಮುಂದಾಗಿರುವುದು ಕಾರ್ವಿುಕ ವಿರೋಧಿಯಾಗಿದೆ. ಕೂಡಲೆ ಖಾಸಗೀಕರಣ ಕೈಬಿಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹೆಸ್ಕಾಂ ಸಿಬ್ಬಂದಿ ಒಕ್ಕೂಟದ ಕಾರ್ಯದರ್ಶಿ ಎ.ಡಿ. ಸೋಮಾಪುರ, ಸಹಾಯಕ ಇಂಜಿನಿಯರ್ಗಳಾದ ಹರೀಶ ಕೊಲ್ಲಾಪುರ, ಕೆ. ಮಂಜುನಾಥ, ಚನ್ನಪ್ಪ ದೊಡ್ಡಮನಿ, ರಮೇಶ ಅರ್ಕಸಾಲಿ, ಎಂ.ಬಿ. ತೆಳಗಿನಕೇರಿ, ಸುರೇಶ ಮೂಲಿಮನಿ, ಪ್ರದೀಪ ಗಡ್ಡದ, ಎಂ.ಎಂ. ಮುಲ್ಲಾ, ಪ್ರವೀಣ ಗುಡ್ಡಣ್ಣನವರ, ಸಾಗರ ಗಣೇಶಗುಡಿ ಇತರರು ಇದ್ದರು.