ಜಿಲ್ಲೆ

ಹೆಸ್ಕಾಂ ಪಿಂಚಣಿದಾರರ ಬೇಡಿಕೆ ಈಡೇರಿಕೆಯ ಭರವಸೆ

ಹುಬ್ಬಳ್ಳಿ : ಹೆಸ್ಕಾಂ ಪಿಂಚಣಿದಾರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮ್ ಪೀರ ಖಾದ್ರಿ ಅವರು ಹೇಳಿದ್ದಾರೆ.

ಇಲ್ಲಿನ ಗೋಪನಕೊಪ್ಪದಲ್ಲಿನ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ 80 ವರ್ಷ ಪೂರೈಸಿದ ಹೆಸ್ಕಾಂ ಪಿಂಚಣಿದಾರರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಲಾಖೆಯ ಏಳಿಗೆಗೆ ಶ್ರಮಿಸಿ ನಿವೃತ್ತರಾದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಲಹೆ, ಸೂಚನೆಗಳು ಹಾಗೂ ಮಾರ್ಗದರ್ಶನದಲ್ಲಿ ಹೆಸ್ಕಾಂ ಅನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವುದಾಗಿ ತಿಳಿಸಿದರು.

ಹೆಸ್ಕಾಂನ ತಾಂತ್ರಿಕ ನಿರ್ದೇಶಕ ಎಸ್.ಜಗದೀಶ ಮಾತನಾಡಿ, ಆದ್ಯತೆಯನುಸಾರ ಹೆಸ್ಕಾಂ ಪಿಂಚಣಿದಾರರ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಹೇಳಿದರು.

80 ವರ್ಷ ಪೂರೈಸಿದ ಹೆಸ್ಕಾಂ ಪಿಂಚಣಿದಾರರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಎಂ.ಎಲ್., ಮಾಜಿ ವ್ಯವಸ್ಥಾಪಕ ನಿರ್ದೇಶಕ ಎಸ್.ಡಿ. ಉಕ್ಕಲಿ, ಬೆಂಗಳೂರಿನ ಕೆಇಬಿ ಪಿಂಚಣಿದಾರರ ಸಂಘದ ರಾಜ್ಯಾಧ್ಯಕ್ಷ ಬಿ.ಪಿ. ಕುಮಾರಸ್ವಾಮಿ, ಉಪಾಧ್ಯಕ್ಷ ಕೆ. ವೀರಭದ್ರಪ್ಪ, ಪ್ರಧಾನ ಕಾರ್ಯದರ್ಶಿ ಬೋರೆಗೌಡ, ಸಹಕಾರ್ಯದರ್ಶಿ ಶಾಮರಾವ್ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.