ಚಿಕ್ಕಬಳ್ಳಾಪುರ: ಗೌರಿಬಿದನೂರು ನಗರದ ಕಲ್ಲೂಡಿಯಲ್ಲಿ 9ನೇ ಶತಮಾನಕ್ಕೆ ಸೇರಿದ ಗಂಗರ ಕಾಲದ ಮೂರು ವೀರಗಲ್ಲುಗಳು ಪತ್ತೆಯಾಗಿವೆ.
ಗ್ರಾಮದ ಸುಬ್ಬರಾಯಪ್ಪ ಎಂಬುವರ ಜಮೀನಿನಲ್ಲಿ ವೀರಗಲ್ಲುಗಳು ಇರುವುದಾಗಿ ಸುಮಾರು ದಿನಗಳಿಂದ ಜಾಲತಾಣಗಳಲ್ಲಿ ಮಾಹಿತಿ ಹರಿದಾಡುತ್ತಿತ್ತು. ಈ ಹಿನ್ನಲೆಯಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ ಸದಸ್ಯ ಕೆ.ಧನಪಾಲ್ ಸ್ಥಳಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದಾಗ ಮೂರು ವೀರಗಲ್ಲುಗಳು ಪತ್ತೆಯಾಗಿವೆ.
ಒಂದು ತುರುಗೋಳ್ಗೆ ಸಂಬಂಧಪಟ್ಟ ವೀರಗಲ್ಲಾಗಿದೆ, ವೈರಿಗಳು ಗ್ರಾಮಗಳನ್ನು ನಾಶಮಾಡಲು ಆ ಗ್ರಾಮದ ಜೀವನಾಡಿಯಾಗಿದ್ದ ಗೋವುಗಳನ್ನು ಕದ್ದೊಯ್ಯುವಾಗ ಅದೇ ಗ್ರಾಮದ ವೀರನು ವೈರಿಗಳೊಡನೆ ಹೋರಾಡಿ ಮಡಿದಿದ್ದಾನೆ. ವೀರನು ಒಂದು ಕೈಯಲ್ಲಿ ಖಡ್ಗ ಮತ್ತೊಂದು ಕೈಯಲ್ಲಿ ಬಿಲ್ಲನ್ನು ಹಿಡಿದು ಹೋರಾಡಿದ್ದಾನೆ. ವೀರನ ಕಾಲಿಗೆ ಮತ್ತು ಹೊಟ್ಟೆಗೆ ಬಾಣ ತಗುಲಿ ವೀರಮರಣ ಹೊಂದಿದ್ದಾನೆ. ಅವನಿಗೆ ಅಪ್ಸರೆಯರು ಸ್ವರ್ಗದಲ್ಲಿ ಪ್ರತಿಷ್ಠಾಪನೆ ಮಾಡಿ ಚಾಮರ ಬೀಸುತ್ತಿದ್ದಾರೆ. ವೀರ ಹೋರಾಡಿ ವಾಪಸ್ಸು ತಂದ ಗೋವುಗಳ ಶಿಲ್ಪ ವೀರನ ಕಾಲಬಳಿ ಕೆತ್ತಲಾಗಿದೆ. ಎರಡನೇ ವೀರನೂ ಸಹ ಒಂದು ಕೈಯಲ್ಲಿ ಭರ್ಜಿ, ಮತ್ತೊಂದು ಕೈಯಲ್ಲಿ ಚಂದ್ರಾಯುಧ ಹಿಡಿದು ಹೋರಾಡುತ್ತಾ ಸ್ವರ್ಗವಾಸಿಯಾಗಿದ್ದಾನೆ. ಮೂರನೇ ವೀರಗಲ್ಲಿನಲ್ಲಿ ವೀರ ಬಿಲ್ಲನ್ನು ಹಿಡಿದು ಹೋರಾಡುತ್ತಿದ್ದಾನೆ. ಈ ಮೂರೂ ವೀರರು ತನ್ನೂರನ್ನು ರಕ್ಷಿಸಲು ವೈರಿಗಳೊಡನೆ ಹೋರಾಡುತ್ತ ವೀರಮರಣವನ್ನಪ್ಪಿದ್ದಾರೆ ಎಂದು ಧನಪಾಲ್ ತಿಳಿಸಿದರು.
ಕಲ್ಲೂಡಿ ಗ್ರಾಮ ಗಂಗರ ಕಾಲದಲ್ಲಿ ಸಂಪದ್ಭರಿತ ಊರಾಗಿತ್ತು ಎಂಬುದನ್ನು ಈ ವೀರಗಲ್ಲುಗಳಿಂದ ತಿಳಿಯಬಹುದಾಗಿದೆ. ಮೂರು ವೀರಗಲ್ಲುಗಳನ್ನು ಒಂದು ಮಂಟಪದಲ್ಲಿ ಸಂಗ್ರಹಿಸಿಡಲಾಗಿದೆ. ಗ್ರಾಮಸ್ಥರಾದ ಗಂಗಪ್ಪ, ಪುಟ್ಟಲಕ್ಷ್ಮಮ್ಮ, ಶ್ರೀರಾಮ್ ಮತ್ತು ಬಾಲಕೃಷ್ಣ ಸಂಗ್ರಹಕ್ಕೆ ನೆರವಾಗಿದ್ದಾರೆ. ಈ ಮೊದಲು ಗ್ರಾಮದಲ್ಲಿ ದೊರೆತಿದ್ದ ವಿಜಯನಗರ ಕಾಲದಲ್ಲಿ ಗ್ರಾಮದ ಜಲಸೂತ್ರದಾರಿ ಸಿಂಗಾಯಭಟ್ಟನ ಪ್ರಸ್ತಾಪವಿರುವ ಶಾಸನವನ್ನು ಹೊಸೂರಿನ ಎಚ್.ನರಸಿಂಹಯ್ಯ ವಿಜ್ಞಾನ ಕೇಂದ್ರದಲ್ಲಿ ಸಂರಕ್ಷಿಸಿಡಲಾಗಿದೆ.